ಸರ್ಕಾರಿ ಹುದ್ದೆಗಳ ಭರ್ತಿ ಮತ್ತು ವಯೋಮಿತಿ ಸಡಿಲಿಕೆಗಾಗಿ ಪ್ರತಿಭಟನೆಗೆ ಅನುಮತಿ ನಿರಾಕರಸಿ, ವಿದ್ಯಾರ್ಥಿ ಮುಖಂಡರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ, ಉದ್ಯೋಗಾಕಾಂಕ್ಷಿಗಳ ಸಮಸ್ಯೆ ನೇರವಾಗಿ ಸಿಎಂಗೆ ತಿಳಿಸಲು ಭೇಟಿಗೆ ಅವಕಾಶ ಕಲ್ಪಿಸುವಂತೆ ನಿರ್ದೇಶನ.

ಧಾರವಾಡ (ಡಿ.16) : ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳುವುದು, ಸರ್ಕಾರಿ ಹುದ್ದೆಗೆ ಬೇಕಾದ ವಯೋಮಿತಿಯಲ್ಲಿ ಸಡಿಲಿಕೆ ಸೇರಿದಂತೆ ಇತ್ಯಾದಿ ಬೇಡಿಕೆ ಈಡೇರಿಸುವಂತೆ ಎರಡ್ಮೂರು ಬಾರಿ ಪ್ರತಿಭಟನೆಗೆ ಸಜ್ಜಾಗಿ ಪೊಲೀಸ್‌ ಪರವಾನಗಿ ಸಿಗದೇ ಹೈಕೋರ್ಟ್‌ ಮೊರೆ ಹೋಗಿದ್ದ ವಿದ್ಯಾರ್ಥಿ ಮುಖಂಡರಿಗೆ ಧಾರವಾಡ ಹೈಕೋರ್ಟ್‌ ಪೀಠವು ಮುಖ್ಯಮಂತ್ರಿ ಭೇಟಿ ಮಾಡಲು ಸೂಚಿಸಿ ಆದೇಶಿಸಿದೆ. 

ಈ ಸಂಬಂಧ ಅರ್ಜಿದಾರರು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ಅವರ ಮೂಲಕ ಸಿಎಂ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳುವಂತೆ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೋಮವಾರ ಆದೇಶಿಸಿತು.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಲು ಎರಡು ಬಾರಿ ಪೊಲೀಸರು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಅಸೋಸಿಯೇಶನ್ ಅಧ್ಯಕ್ಷ ಕಾಂತಕುಮಾರ್ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಉದ್ಯೋಗಾಕಾಂಕ್ಷಿಗಳ ಮುಖ್ಯಮಂತ್ರಿ ಭೇಟಿಗೆ ಅವಕಾಶ ಕೊಡಿಸುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದರು.