ಸರ್ಕಾರಿ ಉದ್ಯೋಗ, ವಯೋಮಿತಿ ಸಡಿಲಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿದ್ಯಾರ್ಥಿಗಳು ಆಯೋಜಿಸಿದ್ದ 'ಧಾರವಾಡ ಚಲೋ' ಬೃಹತ್ ಪ್ರತಿಭಟನೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಪ್ರತಿಭಟನೆಯ ರೂಪುರೇಷೆಗಳಲ್ಲಿನ ಅಸ್ಪಷ್ಟತೆ ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಧಾರವಾಡ (ನ.29): ಸರ್ಕಾರಿ ಉದ್ಯೋಗ ಕರೆಯದಿರುವುದು, ವಯೋಮಿತಿ ಸಡಿಲಿಕೆ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ ಡಿಸೆಂಬರ್ 1 ರಂದು ವಿದ್ಯಾರ್ಥಿ ಸಂಘಟನೆಗಳು ಮತ್ತು ಉದ್ಯೋಗಾಕಾಂಕ್ಷಿಗಳು ಆಯೋಜಿಸಿದ್ದ 'ಧಾರವಾಡ ಚಲೋ' ಬೃಹತ್ ಪ್ರತಿಭಟನೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕಚೇರಿ ಅನುಮತಿ ನಿರಾಕರಿಸಿದೆ. ಪ್ರತಿಭಟನೆಯ ರೂಪುರೇಷೆಗಳಲ್ಲಿನ ಅಸ್ಪಷ್ಟತೆ ಮತ್ತು ಸಾರ್ವಜನಿಕರಿಗೆ ಆಗುವ ಅನಾನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ನೋಟೀಸ್:
ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಸುಮಾರು 30 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಯೋಜಕರು ಹೇಳಿದ್ದರು. ಪೊಲೀಸ್ ಆಯುಕ್ತರು ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿದಾಗ, ಪ್ರತಿಭಟನೆಯ ಸ್ವರೂಪದಲ್ಲಿ ಗೊಂದಲವಿರುವುದು ಕಂಡುಬಂದಿದೆ. ಜಂಕ್ಷನ್‌ಗಳನ್ನು ಬಂದ್ ಮಾಡಬೇಕು, ಅಹೋರಾತ್ರಿ ಧರಣಿ ನಡೆಸಬೇಕು ಎಂಬಂತಹ ಅಂಶಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ, ಪ್ರತಿಭಟನೆಯ ಆಯೋಜಕರು ಯಾರು, ಎಲ್ಲಿಂದ ಮತ್ತು ಯಾವ ಸ್ವರೂಪದ ಜನರು ಭಾಗವಹಿಸುತ್ತಾರೆ ಎಂಬ ಕುರಿತು ಪೊಲೀಸ್ ಇಲಾಖೆ ನೋಟಿಸ್ ನೀಡಿ ಸ್ಪಷ್ಟನೆ ಕೇಳಿತ್ತು.
ಜನಸಮಾನ್ಯರಿಗೆ ವಿದ್ಯಾರ್ಥಿಗಳಿಗೆ ತೊಂದರೆ:
ಈ ಹಿಂದೆ ಧಾರವಾಡದ ಜುಬ್ಲಿ ವೃತ್ತದಲ್ಲಿ ಏಕಾಏಕಿ ನಡೆದ ಪ್ರತಿಭಟನೆಯಿಂದ ರಸ್ತೆ ಜಾಮ್ ಆಗಿ ಆಂಬುಲೆನ್ಸ್‌ಗಳ ಸಂಚಾರಕ್ಕೂ ತೊಂದರೆಯಾಗಿತ್ತು. ಅಲ್ಲದೆ, ಧಾರವಾಡದಲ್ಲಿ ಹಲವಾರು ಸರ್ಕಾರಿ ಕಚೇರಿಗಳು ಇರುವುದರಿಂದ ಬೃಹತ್ ಪ್ರತಿಭಟನೆಯು ಜನಸಾಮಾನ್ಯರಿಗೆ ತೀವ್ರ ಅನಾನುಕೂಲ ಉಂಟುಮಾಡುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ, ಪ್ರತಿಭಟನೆಯ ರೂಪುರೇಷೆಯ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣದಿಂದಾಗಿ ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಜನಸಾಮಾನ್ಯರ ವೇದಿಕೆ, ಕೆಲ ವಿದ್ಯಾರ್ಥಿ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ ಎನ್ನಲಾಗಿದೆ. ಸಪ್ತಾಪೂರ ಭಾಗ ಮತ್ತು ಇತರೆಡೆ ಸುಮಾರು 80 ಸಾವಿರದಿಂದ 1 ಲಕ್ಷ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಇರುವುದರಿಂದ, ಕಾನೂನು ಸುವ್ಯವಸ್ಥೆ ಕಾಪಾಡಲು ಅನುಮತಿ ನಿರಾಕರಣೆ ನಿರ್ಣಾಯಕವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


