ಕೇಂದ್ರ ಸರ್ಕಾರದ ನೀತಿಗಳಿಂದ ದೇಶದಲ್ಲಿ ನಿರುದ್ಯೋಗವು ಐತಿಹಾಸಿಕ ಮಟ್ಟಕ್ಕೆ ಏರಿದೆ ಇದಕ್ಕೆ ವ್ಯತಿರಿಕ್ತವಾಗಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಬಂಡವಾಳ ಆಕರ್ಷಣೆ, ಸರ್ಕಾರಿ ಹುದ್ದೆಗಳ ಭರ್ತಿ ಯುವ ನಿಧಿ ಯೋಜನೆಯಂತಹ ಕ್ರಮಗಳ ಮೂಲಕ ನಿರುದ್ಯೋಗ ದರ ಗಣನೀಯವಾಗಿ ಕಡಿಮೆ ಮಾಡಿದೆ
ಎಚ್.ಎಸ್. ಮಂಜುನಾಥಗೌಡ
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು
ರಾಜ್ಯದಲ್ಲಿ ಕೆಲ ದಿನಗಳಿಂದ ಶಿಕ್ಷಣ ಕಾಶಿ ಧಾರವಾಡ ಸೇರಿದಂತೆ ವಿವಿದೆಡೆ ಸರ್ಕಾರಿ ಹುದ್ದೆಗಳ ಭರ್ತಿ ಹಾಗೂ ವಯೋಮಿತಿ ಸಡಿಲಿಕೆಗಾಗಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ನಿರುದ್ಯೋಗದ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ವಾಸ್ತವವಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅಪಾಯಕಾರಿ ಮಟ್ಟಕ್ಕೆ ಹೋಗಲು ಕಾರಣ ಕೇಂದ್ರ ಸರ್ಕಾರ.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಎನ್‌ಡಿಎ 11 ವರ್ಷದಲ್ಲಿ 22 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು .ಆದರೆ, ದೇಶದಲ್ಲಿ ಐದು ದಶಕಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಸಿದೆ. ಆ ಮೂಲಕ ಯುವಕರ ಭವಿಷ್ಯ ನರಕವನ್ನಾಗಿಸಿದ್ದಾರೆ.
ಕೇಂದ್ರ ಸರ್ಕಾರದ 40 ಲಕ್ಷ ಮಂಜೂರಾದ ಸರ್ಕಾರಿ ಹುದ್ದೆಗಳಲ್ಲಿ ಶೇ.25 ರಷ್ಟು ಅಂದರೆ 10 ಲಕ್ಷ ಹುದ್ದೆಗಳು ಖಾಲಿಯಿವೆ. ರೈಲ್ವೆಯಲ್ಲಿ ಶೇ.40 ರಷ್ಟ, ಗೃಹ ಇಲಾಖೆಯಲ್ಲಿ ಶೇ.33, ರಕ್ಷಣಾ ಇಲಾಖೆಯಲ್ಲೇ ಶೇ.12 ಖಾಲಿಯಿವೆ.
ವೇಜ್ ಬಿಲ್ ಮಂಡಿಸುವಾಗ 2023ರ ಮಾ.1 ರಂದು ಕೇಂದ್ರ ಸರ್ಕಾರವೇ ಅಧಿಕೃತವಾಗಿ 9.67 ಲಕ್ಷ ಹುದ್ದೆ ಖಾಲಿಯಿವೆ ಎಂದಿತ್ತು. ಈಗ ಈ ಸಂಖ್ಯೆ 10 ಲಕ್ಷ ದಾಟಿದೆ.ಶೇ.25 ರಷ್ಟು ಹುದ್ದೆ ಖಾಲಿಯಿದ್ದು, ಈ ಪೈಕಿ ಬಿ ಗ್ರೂಪ್ ನಲ್ಲಿ ಶೇ.33, ಸಿ ಗ್ರೂಪ್ ನಲ್ಲಿ ಶೇ. 24, ಎ ಗ್ರೂಪ್ ನಲ್ಲಿ ಶೇ.23 ಖಾಲಿ ಇವೆ. ಮೋದಿ ಆಡಳಿತದಲ್ಲಿ ಹಣದುಬ್ಬರ ಗಗನಕ್ಕೇರಿದರೆ ರುಪಾಯಿ ದರ ಕುಸಿಯುತ್ತಿದೆ.
ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆಯ ವರದಿಯೊಂದರ ಪ್ರಕಾರ 2017-18 ರ ಅವಧಿಯಲ್ಲಿ ದೇಶ ಕಳೆದ 45 ವರ್ಷಗಳಲ್ಲಿ ಎಂದೂ ಎದುರಿಸದಷ್ಟು ನಿರುದ್ಯೋಗದ ಸಮಸ್ಯೆಯನ್ನು ಎದುರಿಸಿತ್ತು. 1972-73 ರಲ್ಲಿ ಭಾರತದ ನಿರುದ್ಯೋಗ ಪ್ರಮಾಣ 6.1 ರಷ್ಟಿತ್ತು. ಆದರೆ 2017-18 ರಲ್ಲಿ ಈ ಪ್ರಮಾಣ ಶೇ.7.6 ಕ್ಕೆ ಏರಿಕೆಯಾಗಿ ದಾಖಲೆ ಬರೆದಿತ್ತು.
ಇತ್ತೀಚೆಗೆ ಬಿಡುಗಡೆಯಾದ ಸಿಎಂಐಇ ವರದಿ ಪ್ರಕಾರ, 2025ರ ಅಕ್ಟೋಬರ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ. 7.5ರಷ್ಟಿದೆ ಏರಿದೆ. ಇದು ಕಳೆದ ಆರು ತಿಂಗಳಲ್ಲೇ ಗರಿಷ್ಠ ಮಟ್ಟ. ಐದು ದಶಕಗಳ ಹಿಂದಿದ್ದ ನಿರುದ್ಯೋಗ ದರಕ್ಕಿಂತ ಹೆಚ್ಚು.
ಲೇಬರ್ ಫೋರ್ಸ್ ಸಮೀಕ್ಷೆಯ ಇತ್ತೀಚಿನ ವರದಿ ಪ್ರಕಾರ, ದೇಶದ ಸರಾಸರಿ ನಿರುದ್ಯೋಗ ದರ ಶೇ.18 ರಷ್ಟಿದೆ. ಈ ಪೈಕಿ ಹರಿಯಾಣ ಶೇ.37.04, ರಾಜಸ್ತಾನ ಶೇ.28.5, ಬಿಹಾರ ಶೇ.19.01, ಮಹಾರಾಷ್ಟ್ರ ಶೇ.3 ರಷ್ಟು ನಿರುದ್ಯೋಗ ಪ್ರಮಾಣ ದಾಖಲಿಸಿವೆ. ಆದರೆ, ಕರ್ನಾಟಕ ಕೇವಲ ಶೇ.2.5 ರಷ್ಟು ನಿರುದ್ಯೋಗ ಪ್ರಮಾಣ ಹೊಂದಿದೆ. ಇದು ಯುವ ನಿಧಿ ಗ್ಯಾರಂಟಿ ಪರಿಣಾಮ.
ರಾಜ್ಯದಲ್ಲಿ ದುಸ್ಥಿತಿ ತಂದಿದ್ದು ಬಿಜೆಪಿ:
ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರು ಮತ್ತು ಉದ್ಯೋಗ ಹುಡುಕಿ ಬೇಸತ್ತು ಹುಡುಕಾಟ ನಿಲ್ಲಿಸಿರುವವರನ್ನು ಒಟ್ಟಾಗಿ ಸೇರಿಸಿದರೆ ಅದನ್ನು ಗ್ರೇಟರ್ ಅನ್‍ಎಂಪ್ಲಾಯ್‍ಮೆಂಟ್ ರೇಟ್ ಎಂದು ಕರೆಯುತ್ತಾರೆ. ರಾಜ್ಯದಲ್ಲಿ 2018ರಲ್ಲಿ ಗ್ರೇಟರ್ ಅನ್‍ಎಂಪ್ಲಾಯಿಂಟ್ ದರವು ಶೇ 4.42ರಷ್ಟಿತ್ತು. ಆಗ ನಮ್ಮ ಕಾಂಗ್ರೆಸ್ ಸರ್ಕಾರ ನಿಯಂತ್ರಣಕ್ಕೆ ತಂದಿತ್ತು. ಆದರೆ ಅದೇ ಗ್ರೇಟರ್ ಅನ್‌ಎಂಪ್ಲಾಯ್ಮೆಂಟ್ ದರ 2022-23ರಲ್ಲಿ ಶೇ 11.73 ರಷ್ಟಕ್ಕೆ ಏರಿಕೆಯಾಗಿತ್ತು. ನಮ್ಮ ಸರ್ಕಾರದ ಅವಧಿಗೆ ಹೋಲಿಸಿದರೆ ಶೇ 7.3ರಷ್ಟು ನಿರುದ್ಯೋಗ ಹೆಚ್ಚಾಗಿತ್ತು. ರಾಜ್ಯದಲ್ಲಿ ನಿರುದ್ಯೋಗಕ್ಕೆ ಕೊಡುಗೆ ನೀಡಿದ್ದು ಭ್ರಷ್ಟ ಬಿಜೆಪಿ ಸರ್ಕಾರ.
ಕಾಂಗ್ರೆಸ್‌ನಿಂದ ನಿರುದ್ಯೋಗ ಕುಸಿತ:
ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ (ಪಿಎಲ್ ಎಫ್‌ಎಸ್)ಪ್ರಕಾರ ಪದವೀದರರಲ್ಲಿ ನಿರುದ್ಯೋಗ ದರವು ಶೇ. 18.9 ರಷ್ಟಿದ್ದು, ಡಿಪ್ಲೊಮಾ ಪಡೆದವರಲ್ಲಿ ಶೇ. 17.1 ರಷ್ಟಿದೆ. ಕರ್ನಾಟಕದಲ್ಲಿ ನಿರುದ್ಯೋಗ ದರವು ಶೇ. 2.5 ರಷ್ಟಿದೆ, ಇದು ಇತರ ರಾಜ್ಯಗಳಿಗಿಂತ ಕಡಿಮೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಗೆ ಸಾಕ್ಷಿ.
ನ್ಯಾಯ ಒದಗಿಸಲು ಬದ್ಧ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಸಾವಿರಾರು ಸರ್ಕಾರಿ ಹುದ್ದೆ ಭರ್ತಿ ಮಾಡಿದೆ. ಮೂರು ದಶಕಗಳ ಬೇಡಿಕೆಯಾಗಿರುವ ಎಸ್ಸಿ ಒಳ ಮೀಸಲಾತಿ ಈಡೇರಿಸಿದೆ. ಸಿ ಅಂಡ್ ಆರ್ ನಿಯಮ ತಿದ್ದುಪಡಿ ಮಾಡುತ್ತಿದೆ. ಇದಕ್ಕಾಗಿ ಕೆಲ ತಿಂಗಳುಗಳ ಕಾಲ ನೇಮಕಾತಿ ಹಾಗೂ ಬಡ್ತಿ ತಡೆ ಹಿಡಿಯಲಾಗಿತ್ತು. ಒಳ ಮೀಸಲಾತಿ ಕುರಿತು ನ್ಯಾಯಾಲಯದಲ್ಲಿನ ಗೊಂದಲ ಬಗೆಹರಿದ ಕೂಡಲೇ ರಾಜ್ಯದಲ್ಲಿ ನೇಮಕಾತಿ ಪರ್ವ ಆರಂಭವಾಗಲಿದೆ.
ಕೆಲ ಬಿಜೆಪಿ ನಾಯಕರು, ಬಿಜೆಪಿಯ ಅಂಗಸಂಸ್ಥೆ ಎಬಿವಿಪಿಯ ಕಾರ್ಯಕರ್ತರು ಖಾಲಿ ಹುದ್ದೆಗಳ ಸಂಖ್ಯೆಯನ್ನು ದೊಡ್ಡದಾಗಿ ಬಿಂಬಿಸಲು ಹೊರಟಿದ್ದಾರೆ.ಆದರೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 5.22 ಲಕ್ಷ ಇದ್ದ ಸರ್ಕಾರಿ ಉದ್ಯೋಗಗಳನ್ನು 5.88 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಗುತ್ತಿಗೆ ನೌಕರರ ಸಂಖ್ಯೆ 96,884 ಕ್ಕೆ ಇಳಿಸಲಾಗಿದೆ.
ಬಿಜೆಪಿಯ ಅವಧಿಯಲ್ಲಿ 2.5 ಲಕ್ಷ ಹುದ್ದೆ ಖಾಲಿ ಇತ್ತು. ಕೃಷಿ ಇಲಾಖೆ ಒಂದರಲ್ಲೇ ಶೇ.50 ಕ್ಕಿಂತ ಹೆಚ್ಚು ಹುದ್ದೆ ಖಾಲಿ ಉಳಿದಿತ್ತು. 128 ಕೃಷಿ ಅಧಿಕಾರಿ, 817 ಸಹಾಯಕ ಕೃಷಿ ಅಧಿಕಾರಿ ಸೇರಿದಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಕೃಷಿ ಇಲಾಖೆಯಲ್ಲಿನ ಕೊರತೆ ನೀಗಿಸಿದ್ದು ನಮ್ಮ ಸರ್ಕಾರ.
80,000 ಹುದ್ದೆ ನೇಮಕಕ್ಕೆ ಸಿದ್ದತೆ:
ಸಾವಿರಾರು ಹುದ್ದೆಗಳ ನೇಮಕಕ್ಕೆ ಸಿದ್ಧತೆ ನಡೆದಿದೆ. ವಿವಿಧ ಇಲಾಖೆಗಳು 80 ಸಾವಿರ ನೌಕರರ ನೇಮಕಾತಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಕೆಲ ಪ್ರಸ್ತಾವನೆಗೆ ಈಗಾಗಲೇ ಹಣಕಾಸು ಇಲಾಖೆ ಅಂಗೀಕಾರ ದೊರೆತಿದೆ.
2 ವರ್ಷದಲ್ಲಿ 2.32 ಲಕ್ಷ ಉದ್ಯೋಗ ಸೃಷ್ಟಿ:
ರಾಜ್ಯದಲ್ಲಿ ಎರಡು ವರ್ಷದಲ್ಲಿ ₹6,57,660 ಕೋಟಿ ಬಂಡವಾಳ ಹೂಡಿಕೆಯ 115 ಒಪ್ಪಂದ ಮಾಡಿಕೊಂಡಿದೆ. ಇದರಿಂದ 2,32,771 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
ಇನ್ನು ರಾಜ್ಯ ಸರ್ಕಾರವು 2025-30ರ ಕೈಗಾರಿಕಾ ನೀತಿಯ ಮೂಲಕ ₹7.50 ಲಕ್ಷ ಕೋಟಿ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ.
ಪ್ರಸಕ್ತ ಸಾಲಿನಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿ:
ೆಬ್ರವರಿಯಲ್ಲಿ ನಡೆದ ''ಇನ್ವೆಸ್ಟ್ ಕರ್ನಾಟಕ''ದಲ್ಲಿ ಒಟ್ಟು 98 ಕಂಪನಿಗಳ ಜೊತೆಗೆ ₹6,23,970 ಕೋಟಿ ಹೂಡಿಕೆಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೆ, ₹4,03,533 ಕೋಟಿ ಹೂಡಿಕೆ ಮಾಡಲು 1,101 ಕಂಪನಿಗಳು ವಿವಿಧ ಸಮಿತಿಗಳಿಂದ ಅನುಮೋದನೆ ಪಡೆದಿವೆ. ಇವುಗಳಿಂದ ರಾಜ್ಯದಲ್ಲಿ ಸುಮಾರು 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ರಾಜಕೀಯ ಕಾರಣಗಳಿಗೆ ರಾಜ್ಯಕ್ಕೆ ಬರುವ ಕಂಪೆನಿಗಳನ್ನು ಎನ್‌ಡಿಎ ರಾಜ್ಯಗಳಿಗೆ ನೂಕುತ್ತಿದ್ದರೂ ಕರ್ನಾಟಕಕ್ಕೆ 80,997 ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ.
ಸರ್ಕಾರಿ ಹುದ್ದೆ ಬಿಕರಿ ಮಾಡಿದ್ದು ಬಿಜೆಪಿ:
ಬಿಜೆಪಿ ಅವಧಿಯಲ್ಲಿ ಎಲ್ಲಾ ನೇಮಕಾತಿಗಳಲ್ಲೂ ಅಕ್ರಮ ನಡೆದಿದೆ. ಪಿಎಸ್‌ಐ ನೇಮಕಾತಿ ಹಗರಣ ನಡೆದು ನೇಮಕಾತಿ ಎಡಿಜಿಪಿಯೇ ಜೈಲು ಸೇರಿದ್ದರು. ಬಿಜೆಪಿ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಮುಖ್ಯಮಂತ್ರಿಗಳ ಪುತ್ರ PSI ನೇಮಕಾತಿ ಹಗರಣದ ನೇರ ರೂವಾರಿ ಎಂದಿದ್ದರು.
ರಾಜ್ಯ ಬಿಜೆಪಿಗರು, ಬಿಜೆಪಿಯ ರಾಜಕೀಯ ಶಿಶು ಎಬಿವಿಪಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಗ್ಗೆ ಮಾತನಾಡುತ್ತಿದೆ. ಕಳೆದ ಬಾರಿ ನಿಮ್ಮ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ.10 ಭರವಸೆಗಳನ್ನೂ ಪೂರೈಸಲಾಗಿಲ್ಲ ಯಾಕೆ? ಕರ್ನಾಟಕದಲ್ಲಿ ಸುಮಾರು 2.5 ಲಕ್ಷ ಸರ್ಕಾರಿ ಉದ್ಯೋಗ, ಸುಮಾರು 7.5 ಲಕ್ಷ ಖಾಸಗಿ ಉದ್ಯೋಗ ನೇಮಕಕ್ಕೆ ಅವಕಾಶವಿದ್ದರೂ ಬಿಜೆಪಿಯ ಐದು ವರ್ಷದ ಅವಧಿಯಲ್ಲಿ ಯಾಕೆ ಮಾಡಲಿಲ್ಲ ಎಂಬುದಕ್ಕೆ ಉತ್ತರಿಸಬೇಕು.
ಬಿಜೆಪಿ, ಜೆಡಿಎಸ್‌ಗೆ ಜನರಿಂದಲೇ ಪಾಠ:
ರಾಜ್ಯದಲ್ಲಿ 41 ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮ ಸಿದ್ದಪಡಿಸಲು ಸೂಚಿಸಲಾಗಿದೆ. ಮೂರು ದಶಕಗಳ ಎಸ್ಸಿ ಹೋರಾಟದ ಬೇಡಿಕೆ ಈಡೇರಿಸಲು ಒಳ ಮೀಸಲಾತಿ ಜಾರಿ ಮಾಡಲಾಗುತ್ತಿದೆ.ಇದರಿಂದ ಆಗುತ್ತಿರುವ ವಿಳಂಬವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ-ಜೆಡಿಎಸ್ ಯತ್ನಿಸುತ್ತಿದೆ.ಈ ಹಿಂದೆ ಕನ್ನಡ ಭಾಷೆಯಲ್ಲಿ ಕೇಂದ್ರದ ನೇಮಕಾತಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈಗ ಇದಕ್ಕೆ ಪೂರಕವಾಗಿ ಕೆಲಸ ಮಾಡಲಿ. ಕೇಂದ್ರದ ನೇಮಕಾತಿಗಳಿಗೆ ಪರೀಕ್ಷೆ ನಡೆಸಬೇಕು. ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ತಪ್ಪಿದರೆ, ಬಿಜೆಪಿ, ಜೆಡಿಎಸ್ ಕನ್ನಡಿಗರ ಆಗ್ರಹಕ್ಕೆ ಗುರಿಯಾಗಬೇಕಾಗುತ್ತದೆ.


