ನಟಿ ರನ್ಯಾ ರಾವ್‌ ಬಂಧನ ಅಕ್ರಮವೆಂದು ಘೋಷಿಸಲು ಕೋರಿರುವ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ಹೈಕೋರ್ಟ್‌ ಸೂಚಿಸಿದೆ.

ಬೆಂಗಳೂರು (ಜು.24): ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಿಸಿದ ಆರೋಪದಲ್ಲಿ ‘ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ’ ಕಾಯ್ದೆಯಡಿ (ಕಾಫಿಪೋಸಾ) ನಟಿ ರನ್ಯಾ ರಾವ್‌ ಬಂಧನ ಅಕ್ರಮವೆಂದು ಘೋಷಿಸಲು ಕೋರಿರುವ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ಹೈಕೋರ್ಟ್‌ ಸೂಚಿಸಿದೆ.

ಈ ಕುರಿತು ರನ್ಯಾ ಮಲತಾಯಿ ಎಚ್‌.ಪಿ.ರೋಹಿಣಿ ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಆ.28ಕ್ಕೆ ಮುಂದೂಡಿತು. ವಿಚಾರಣೆ ವೇಳೆ ರೋಹಿಣಿ ಪರ ವಕೀಲರು, ಕಾಫಿಪೋಸಾ ಅಡಿ ನಟಿ ರನ್ಯಾರನ್ನು ಡಿಆರ್‌ಐ ಬಂಧಿಸಿದ ಕ್ರಮವನ್ನು ಹೈಕೋರ್ಟ್‌ನ ಸಲಹಾ ಮಂಡಳಿ ಅನುಮೋದಿಸಿದೆ. ಹಾಗಾಗಿ, ಮೆರಿಟ್‌ ಮೇಲೆ ಅರ್ಜಿ ವಿಚಾರಣೆ ನಡೆಸಬೇಕು ಎಂದು ಕೋರಿದರು.

ಡಿಆರ್‌ಐ ಪರ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌ ಹಾಜರಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಈ ಮನವಿ ಪರಿಗಣಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು. ಚಿನ್ನಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ 2025ರ ಮಾ.3ರಂದು ರನ್ಯಾ ಅವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ನಿಗದಿತ ಸಮಯದಲ್ಲಿ ಡಿಆರ್‌ಐ ಆರೋಪ ಪಟ್ಟಿ ಸಲ್ಲಿಸದ ಕಾರಣ ಕಳೆದ ತಿಂಗಳು ರನ್ಯಾಗೆ ವಿಚಾರಣಾಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ, ಕಾಫಿಪೋಸಾ ಅಡಿ ಬಂಧನವಾಗಿರುವುದರಿಂದ ಆಕೆ ಬಿಡುಗಡೆಯಾಗಿಲ್ಲ.

34 ಕೋಟಿ ಆಸ್ತಿ ವಶ: ವಿದೇಶದಿಂದ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು(ಇ.ಡಿ.) ಪ್ರಮುಖ ಆರೋಪಿ ಹರ್ಷವರ್ಧಿನಿ ರನ್ಯಾ ಅಲಿಯಾಸ್‌ ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಕಾಯ್ದೆಯಡಿ ಆರೋಪಿ ರನ್ಯಾಗೆ ಸೇರಿದ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಳೆದ ಮಾ.3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ವಿದೇಶದಿಂದ 12.56 ಕೋಟಿ ರು. ಮೌಲ್ಯದ 14 ಕೆ.ಜಿ. 213 ಗ್ರಾಂ. ಚಿನ್ನಾಭರಣ ಕಳ್ಳ ಸಾಗಣೆ ಮಾಡುತ್ತಿದ್ದ ರನ್ಯಾ ರಾವ್ ರನ್ನು ಬಂಧಿಸಿದ್ದರು. ಬಳಿಕ ಆಕೆಯ ನಿವಾಸದ ಮೇಲೆ ದಾಳಿ ಮಾಡಿದಾಗ 2.67 ಕೋಟಿ ರು. ದಾಖಲೆ ಇಲ್ಲದ ನಗದು ಮತ್ತು 2.06 ಕೋಟಿ ರು. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು. ಈ ಸಂಬಂಧ ಇ.ಡಿ. ತನಿಖೆ ವೇಳೆ ಪ್ರಮುಖ ಆರೋಪಿಗಳಾದ ರನ್ಯಾ ರಾವ್‌ ಮತ್ತು ತರುಣ್‌ ಕೊಂಡೂರು ರಾಜು ಹಾಗೂ ಇತರರು ಶಾಮೀಲಾಗಿ ವಿದೇಶದಿಂದ ಭಾರತಕ್ಕೆ ಚಿನ್ನ ಕಳ್ಳ ಸಾಗಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆರೋಪಿಗಳು ದುಬೈ, ಉಗಾಂಡ ಹಾಗೂ ಇತರೆ ದೇಶಗಳ ಚಿನ್ನದ ವ್ಯಾಪಾರಿಗಳಿಂದ ಚಿನ್ನ ಖರೀದಿಸಿ ಬಳಿಕ ಹವಾಲಾ ಮತ್ತು ನಗದು ರೂಪದಲ್ಲಿ ಹಣ ಪಾವತಿಸುತ್ತಿದ್ದರು.