ಬೆಂಗಳೂರಿನಲ್ಲಿ 'ಎಐ ರೋಬೋಟ್ ಟ್ರೇಡಿಂಗ್' ಹೆಸರಿನಲ್ಲಿ ಹಣ ಡಬಲ್ ಮಾಡುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ. ರಾಜೇಶ್ ಕಾಮತ್, ಮಧು ಮತ್ತು ನಾಗೇಶಪ್ಪ ನೇತೃತ್ವದ ಈ ಜಾಲವು, ಕರಾವಳಿ ಭಾಗದವರನ್ನೇ ಗುರಿಯಾಗಿಸಿ ಮೋಸ ಮಾಡಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 'ಮನಿ ಡಬಲಿಂಗ್' ಎಂಬ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಎಐ (AI) ರೋಬೋಟ್ ಟ್ರೇಡಿಂಗ್ ಹೆಸರಿನಲ್ಲಿ ಜನರನ್ನು ಮರುಳು ಮಾಡಿ, ಸಂಘಟಿತವಾಗಿ ಹಣ ಸಂಗ್ರಹಿಸಿದ ಮೋಸದ ಜಾಲವು ಕಳೆದ ಎರಡು-ಮೂರು ವರ್ಷಗಳಿಂದ ಸಕ್ರಿಯವಾಗಿತ್ತು ಎಂಬ ಮಾಹಿತಿ ಹೊರಬಂದಿದೆ.

ಈ ವಂಚನೆ ಪ್ರಕರಣದಲ್ಲಿ ರಾಜೇಶ್ ಕಾಮತ್, ಮಧು ಮತ್ತು ನಾಗೇಶಪ್ಪ ಪ್ರಮುಖ ಆರೋಪಿಗಳಾಗಿದ್ದಾರೆ. ಕ್ರಿಸ್ಟಲ್ ಎಐ ರೋಬೋಟ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ನಕಲಿ ಹೂಡಿಕೆ ವೇದಿಕೆ ನಿರ್ಮಿಸಿ, 200 ದಿನಗಳಲ್ಲಿ ಹಣ ಡಬಲ್ ಆಗುತ್ತದೆ ಎಂಬ ಭರವಸೆ ನೀಡುತ್ತಾ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿಸಿಕೊಂಡಿದ್ದರು. ಆರಂಭದಲ್ಲಿ ಕೆಲವರಿಗೆ ಲಾಭ ನೀಡಿದಂತೆ ತೋರಿಸಿ, ಹೆಚ್ಚಿನ ಹೂಡಿಕೆಗಳಿಗೆ ಪ್ರೇರೇಪಿಸಿ ಬಳಿಕ ಸಂಪರ್ಕ ಕಡಿತಗೊಳಿಸುವುದು ಇವರ ತಂತ್ರವಾಗಿತ್ತು.

ಹಣ ಕಳೆದುಕೊಂಡವರು ಕರಾವಳಿ ಭಾಗದವರೇ ಹೆಚ್ಚು

ಆರೋಪಿಗಳು ಚೈನ್ ಲಿಂಕ್ ಕಂಪನಿ ಮಾದರಿಯಲ್ಲಿ ಜಾಲವನ್ನು ವಿಸ್ತರಿಸಿದ್ದು, ಸುಮಾರು 50ಕ್ಕೂ ಹೆಚ್ಚು ಜನರನ್ನು ಏಜೆಂಟ್‌ಗಳಾಗಿ ನೇಮಿಸಿಕೊಂಡು ಹೂಡಿಕೆದಾರರನ್ನು ಸೆಳೆಯುತ್ತಿದ್ದರು. ರಾಜ್ಯದ ವಿವಿಧ ಭಾಗಗಳಿಂದಲೇ ಅಲ್ಲದೆ, ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದಲೂ ಹೂಡಿಕೆ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಹಣ ಹೂಡಿಕೆ ಮಾಡಿ ಮೋಸಹೋಗಿರುವುದು ಬೆಳಕಿಗೆ ಬಂದಿದೆ.

ಆರಂಭದಲ್ಲಿ ಬೆಂಗಳೂರಿನ ಕೆಂಗೇರಿ ರೈಲ್ವೆ ನಿಲ್ದಾಣದ ಸಮೀಪ ಕಚೇರಿ ಆರಂಭಿಸಿದ್ದ ಆರೋಪಿಗಳು, ಬಳಿಕ ತಮ್ಮ ಜಾಲವನ್ನು ವಿಸ್ತರಿಸಿ ದುಬೈ ಸೇರಿದಂತೆ ವಿದೇಶಗಳಲ್ಲಿ ಕಚೇರಿಗಳನ್ನು ಹೊಂದಿರುವಂತೆ ತೋರಿಸಿ, “ನೆಟ್‌ವರ್ಕ್ ಬಿಸಿನೆಸ್” ಹೆಸರಿನಲ್ಲಿ ಜನರನ್ನು ಮೋಡಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ಪರಿಚಯಗಳ ಮೂಲಕ ಹೂಡಿಕೆದಾರರನ್ನು ಸಂಪರ್ಕಿಸಿ, ಹೆಚ್ಚಿನ ಲಾಭದ ಆಸೆ ಮೂಡಿಸಿ ಹಣ ಸಂಗ್ರಹಿಸುವುದು ಇವರ ತಂತ್ರವಾಗಿತ್ತು.

ತನಿಖೆ ಚುರುಕು

ಪ್ರಕರಣ ಬೆಳಕಿಗೆ ಬಂದ ನಂತರ, ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ಪೊಲೀಸರು ಪ್ರಕರಣದ ಹಿನ್ನಲೆ, ಹಣದ ಹರಿವು ಮತ್ತು ಇನ್ನಷ್ಟು ಸಂಬಂಧಿತ ವ್ಯಕ್ತಿಗಳ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾರೆ.

ಒಟ್ಟಿನಲ್ಲಿ, ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದ ಆಮಿಷಕ್ಕೆ ಒಳಗಾಗಿ ಹೂಡಿಕೆ ಮಾಡಿದ ಸಾರ್ವಜನಿಕರು ತಮ್ಮ ದುಡಿಮೆ ಹಣವನ್ನು ಕಳೆದುಕೊಂಡಿದ್ದು, ಇಂತಹ ಮೋಸಗಳಿಂದ ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶ ಮತ್ತೊಮ್ಮೆ ನೀಡದಂತಾಗಿದೆ.