ಕೆಸಿಇಟಿ  ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಸಿದ ಘಟನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಮಾನವೀಯ ಕೃತ್ಯವೆಂದು ಖಂಡಿಸಿರುವ ಅವರು, ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ಬೆಂಗಳೂರು (ಏ.25): ಕೆಸಿಇಟಿ ಬರೆಯಲು ಬಂದಿದ್ದ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಸಚಿವರು, 'ಕೃಪಾನಿಧಿ ಕಾಲೇಜಿನಲ್ಲಿ ಕೆಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ಜನಿವಾರ ಬಿಚ್ಚಿಸಿದ ಘಟನೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಪಾರದರ್ಶಕವಾಗಿ ಕ್ರಮ ಜರುಗಿಸಲಾಗುತ್ತೆ. ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯತುಂಬಿದ್ದಾರೆ.

ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ

ಸಿಇಟಿ ಗೆ ಬರುವ ವಿದ್ಯಾರ್ಥಿಗಳ ಕಿವಿ ಓಲೆ, ಬಳೆ, ಹಿಜಾಬ್ ಅಥವಾ ಜನಿವಾರ ತೆಗೆಸುವುದು, ಹಾಗೂ ಉದ್ದನೆಯ ತೋಳಿಗೆ ಕತ್ತರಿ ಹಾಕುವ ಮೂಲಕ ಅವರ ಮನೋಸ್ಥೈರ್ಯ ಕುಗ್ಗಿಸುವ ಅಮಾನವೀಯ ನಡೆ ಅಕ್ಷಮ್ಯ ಮತ್ತು ಖಂಡನೀಯ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ತಾಣಗಳಾಗಬೇಕೇ ಹೊರತು ಅವರ ಆತ್ಮಗೌರವಕ್ಕೆ ಧಕ್ಕೆ ತರುವ ಸ್ಥಳಗಳಾಗಬಾರದು ಎಂದರು.

ಇಂಥ ಘಟನೆ ಮರುಕಳಿಸಿದರೆ ಕಠಿಣ ಕ್ರಮ

ಇಂಥ ಘಟನೆಗಳು ಮತ್ತೆಂದು ನಮ್ಮ ರಾಜ್ಯದಲ್ಲಿ ಮರುಕಳಿಸದಂತೆ ಸರ್ಕಾರ ಅತ್ಯಂತ ಗಂಭೀರ ಕ್ರಮ ವಹಿಸಲಿದೆ. ಈ ಘಟನೆಯಿಂದ ವಿದ್ಯಾರ್ಥಿಯು ಧೃತಿಗೆಡಬಾರದು ಎಂದು ವಿನಂತಿಸಿದ ಸಚಿವರು, ಪರೀಕ್ಷೆ ಮತ್ತು ಬದುಕಿನ ಗೆಲುವಿನ ದಾರಿಯತ್ತ ಶ್ರದ್ಧೆ ಮತ್ತು ನಿಶ್ಚಿಂತೆಯಿಂದ ಸಾಗಬೇಕು. ನಮ್ಮ ಇಡೀ ಸರ್ಕಾರ ನಿಮ್ಮ ಬೆನ್ನಿಗಿದೆ, ಧೈರ್ಯವಾಗಿ ಪರೀಕ್ಷೆ ಎದುರಿಸಿ ಯಶಸ್ವಿಯಾಗಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವ ದಿನೇಶ್ ಗುಂಡೂರಾವ್ ಅಭಯ ನೀಡಿದರು.