54,430 ಅನುಮಾನಾಸ್ಪದ ಪಿಂಚಣಿದಾರರನ್ನು ಸರ್ಕಾರ ಗುರುತಿಸಿದ್ದು, ಸುಳ್ಳು ದಾಖಲೆಗಳ ಶಂಕೆಯ ಮೇಲೆ ಭೌತಿಕ ಪರಿಶೀಲನೆಗೆ ಆದೇಶಿಸಿದೆ. ಈ ಕ್ರಮದಿಂದ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿದ್ದು, ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಮನಗರ: ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಗರುತಿಸಿ ರದ್ದು ಮಾಡಿದ ರಾಜ್ಯ ಸರ್ಕಾರ ಈಗ ಸಾಮಾಜಿಕ ಭದ್ರತೆ ಮಾಸಾಶನ ಯೋಜನೆಗಳಡಿ ಜಿಲ್ಲೆಯಲ್ಲಿ ಮಾಸಾಶನ ಪಡೆಯುತ್ತಿರುವವರಲ್ಲಿ ಸುಮಾರು 54,430 ಅನುಮಾನಾಸ್ಪದ ಪಿಂಚಣಿದಾರರನ್ನು ಗುರುತಿಸಿದೆ.

ಅರ್ಹ ವ್ಯಕ್ತಿಗಳಿಗೆ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿಯ ಪ್ರಯೋಜನ ದೊರೆಯಬೇಕು. ಆದರೆ, ಜಿಲ್ಲೆಯಲ್ಲಿ 54,430 ಮಂದಿ ಅನುಮಾನಾಸ್ಪದವಾಗಿ ಸುಳ್ಳು ದಾಖಲೆ ಸಲ್ಲಿಸಿ ಪಿಂಚಣಿ ಪಡೆಯುತ್ತಿರುವುದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ.

ಸಂಧ್ಯಾ ಸುರಕ್ಷಾ ವೃದ್ಧಾಪ್ಯ ವೇತನ, ವಿಧವಾ ವೇತನ, ಮೈತ್ರಿ, ಮನಸ್ವಿನಿ, ವಿಶೇಷ ಚೇತನ ಪೋಷಣೆ ಭತ್ಯೆ ಸೇರಿ ಜಿಲ್ಲೆಯಲ್ಲಿ ಲಕ್ಷಾಂತರ ಜನರು ಮಾಸಿಕ 800ರಿಂದ 2000 ರು.ಗಳವರೆಗೂ ಮಾಸಾಶನ ಪಡೆಯುತ್ತಿದ್ದಾರೆ. ಅವರಲ್ಲಿ ಗುರುತಿಸಿರುವ ಅನುಮಾನಾಸ್ಪದ ಪಿಂಚಣಿದಾರರು ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಎಪಿಎಲ್ ಕಾರ್ಡ್‌ದಾರರು, ಜಿಎಸ್‌ಟಿ ನಂಬರ್ ಹೊಂದಿರುವವರು, ನಿಗದಿತ ಮಿತಿಗಿಂತ ಕಡಿಮೆ ವಯಸ್ಸಿನವರೂ ಇದ್ದಾರೆ ಎಂಬ ಅನುಮಾನ ಮೂಡಿದೆ.

ಹಾಗಾಗಿ ರಾಜ್ಯ ಸರ್ಕಾರ ತನ್ನ ಬಳಿ ಇರುವ ದಾಖಲೆ ಆಧರಿಸಿ ಜಿಲ್ಲೆಯಲ್ಲಿ 54,430 ಪಿಂಚಣಿದಾರರನ್ನು ಸಂದೇಹಾಸ್ಪದ ಎಂದು ಗುರುತಿಸಿದೆ. ಅತಿ ಹೆಚ್ಚು ಕನಕಪುರ ತಾಲೂಕಿನಲ್ಲಿ 16,489 ಅನುಮಾನಾಸ್ಪದ ಪ್ರಕರಣಗಳಿದ್ದರೆ, ಅತಿ ಕಡಿಮೆ ಹಾರೋಹಳ್ಳಿ ತಾಲೂಕಿನಲ್ಲಿ 4164 ಸಂದೇಹಾಸ್ಪದ ಪ್ರಕರಣಗಳಿವೆ. ಉಳಿದಂತೆ ರಾಮನಗರ ತಾಲೂಕಿನಲ್ಲಿ 7511, ಮಾಗಡಿ ತಾಲೂಕಿನಲ್ಲಿ 12,056 ಹಾಗೂ ಚನ್ನಪಟ್ಟಣ ತಾಲೂಕಿನಲ್ಲಿ 14,210 ಪಿಂಚಿಣಿದಾರರನ್ನು ಅನುಮಾನಾಸ್ಪದ ಪಟ್ಟಿಗೆ ಸೇರಿಸಲಾಗಿದೆ.

ಮಾನದಂಡಗಳು ಭೌತಿಕವಾಗಿ ಪರಿಶೀಲನೆ

ಈ ಫಲಾನುಭವಿಗಳ ವಿವರಗಳನ್ನು ಕುಟುಂಬದ ದತ್ತಾಂಶದ ಮಾಹಿತಿಯೊಂದಿಗೆ ವಯಸ್ಸು, ಆದಾಯ ಮಿತಿ, ಆದಾಯ ತೆರಿಗೆ ಪಾವತಿ, ಎಚ್‌ಆರ್‌ಎಂಎಸ್ ವಿವರಗಳನ್ನು ಸಂಯೋಜಿಸಿ ನೋಡಿದಾಗ ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ಅನರ್ಹ ಫಲಾನುಭವಿಗಳು ಇರುವುದನ್ನು ಗುರುತಿಸಲಾಗಿದೆ.

ಈಗಾಗಲೇ ಗ್ರಾಮವಾರು, ತಾಲೂಕುವಾರು ಮತ್ತು ಜಿಲ್ಲಾವಾರು ಫಲಾನುಭವಿಗಳ ವಿವರಗಳನ್ನು ಎಲ್ಲ ತಹಸೀಲ್ದಾರ್ ಗಳಿಗೆ ಒದಗಿಸಲಾಗಿದೆ. ಫಲಾನುಭವಿಗಳ ವಯಸ್ಸು, ಆದಾಯ ಮಿತಿ, ಎಪಿಎಲ್, ಆದಾಯ ತೆರಿಗೆ ಪಾವತಿ ಮತ್ತು ಎಚ್ಆರ್‌ಎಂಎಸ್ ಮಾನದಂಡಗಳನ್ನು ಭೌತಿಕವಾಗಿ ಪರಿಶೀಲಿಸಬೇಕು. ಅನರ್ಹ ಫಲಾನುಭವಿಗಳ ಪಿಂಚಣಿಯನ್ನು ರದ್ದು ಪಡಿಸಲು ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ಆಯುಕ್ತರು ಗ್ರಾಮ ಆಡಳಿತ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

"ಸಂಯೋಜನೆ'''' ಎಂಬ ಮೊಬೈಲ್ ಆ್ಯಪ್ ಮೂಲಕ ಅನುಮಾನಾಸ್ಪದ ಪಿಂಚಿಣಿದಾರರ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದ್ದು, ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಅವರ ಲಾಗಿನ್‌ನಲ್ಲಿ ಆಯಾಯ ಗ್ರಾಮಗಳಲ್ಲಿ ಸಂದೇಹಾಸ್ಪದ ಎಂದು ಗುರುತಿಸಿರುವ ಪಿಂಚಣಿದಾರರ ಪಟ್ಟಿ ಕೂಡ ಇದೆ.

ಸರ್ಕಾರದ ಮಿತಿ ನಿಗದಿಯೇ ಗೊಂದಲಕ್ಕೆ ಕಾರಣ

ವಾರ್ಷಿಕ 1.20 ಲಕ್ಷ ಆದಾಯ ಹೊಂದಿರುವ ಕುಟುಂಬಕ್ಕೆ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ನೀಡುತ್ತಿದೆ. ಆದರೆ, ಪಿಂಚಣಿ ಪಡೆಯುವವರ ಕುಟುಂಬದ ಆದಾಯ ಗರಿಷ್ಠ 32 ಸಾವಿರವಾಗಿರಬೇಕು ಎಂದು ಸರ್ಕಾರ ಮಿತಿ ವಿಧಿಸಿದೆ. ಇದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ, ವಾಸ್ತವವಾಗಿ ಸೌಲಭ್ಯ ಪಡೆಯಲು ಅರ್ಹರಾಗಿರುವವರ ಹೆಸರೂ ಸಂದೇಹಾಸ್ಪದ ಪಟ್ಟಿಯಲ್ಲಿ ಸೇರಿಕೊಂಡಿದೆ. ಈಗ ಪರಿಶೀಲನೆಯ ನಂತರ ಅಂತಹ ಹಲವು ಕುಟುಂಬಗಳಿಗೂ ಪಿಂಚಣಿ ರದ್ದಾಗುವ ಅನುಮಾನವಿದೆ.

ಆಧಾರ್ ಪರಿಶೀಲನೆ ವೇಳೆಯಲ್ಲಿ ಪಿಂಚಣಿದಾರರ ವಯಸ್ಸು ಯೋಜನೆಗೆ ಅರ್ಹವಾದ ವಯಸ್ಸಿಗಿಂತ ಕಡಿಮೆ ಇರುವುದು ಕಂಡು ಬಂದಿದೆ. ಅಲ್ಲದೇ ಆರೋಗ್ಯಕರವಾಗಿರುವವರು ಕೂಡಾ ವಿಕಲಚೇತನ ಪ್ರಮಾಣ ಪತ್ರ ಪಡೆದು ವಿಕಲಚೇತನರ ಪಿಂಚಣಿ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇಂತಹ ಪ್ರಕರಣಗಳ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು. ಇದು ಸರ್ಕಾರಕ್ಕೆ ಮಾಡುವ ವಂಚನೆ ಮಾತ್ರವಲ್ಲದೇ ಸಾರ್ವಜನಿಕರಿಗೆ ಮಾಡುವ ವಂಚನೆಯಾಗಿದೆ ಎನ್ನುತ್ತಾರೆ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಇಲಾಖೆ ಅಧಿಕಾರಿಗಳು.

ನಕಲಿ ಮಾಹಿತಿ ಗುರುತಿಸುವ ವ್ಯವಸ್ಥೆಯಿಲ್ಲ

ಆಧಾರ್ ಕಾರ್ಡ್‌ ಪ್ರಕಾರ 60 ವರ್ಷ ಆಗಿರುವುದಿಲ್ಲ. ಸುಳ್ಳು ದಾಖಲೆ ಕೊಟ್ಟು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇಲ್ಲಿ ಬಿಪಿಎಲ್ ಕಾರ್ಡ್‌, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಅರ್ಜಿ ಹಾಕುವವರ ನಿಖರ ಆದಾಯ ಅಂದಾಜು ಮಾಡುವ ವ್ಯವಸ್ಥೆ ಇಲ್ಲ. ಆದಾಯ ತೆರಿಗೆ ಪಾವತಿಸುವವವರು ಹಾಗೂ ಸರ್ಕಾರಿ ವೇತನ ಪಡೆಯುವವರು ಈ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇದು ಸರಿಯಾಗಬೇಕಾದರೆ, ನಿಖರ ಆದಾಯ ಅಂದಾಜು ಮಾಡುವ ಮೂಲಕ ಅರ್ಹರನ್ನು ಗುರುತಿಸುವ ವ್ಯವಸ್ಥೆ ಬರಬೇಕು.

ಇದನ್ನೂ ಓದಿ: ರಾಮನಗರದ 7481 ಎಕರೆ ವಿಸ್ತೀರ್ಣದಲ್ಲಿ ಗ್ರೇಟರ್‌ ಬೆಂಗಳೂರಿಗೆ ಉಪನಗರ ಯೋಜನೆ: ಚರ್ಚೆ

ಪಿಂಚಿಣಿದಾರರ ಪರ ಶಾಸಕ ಇಕ್ಬಾಲ್ ಧ್ವನಿ

ರಾಜ್ಯ ಸರ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಗುರುತಿಸಿರುವ 54,430 ಅನುಮಾನಾಸ್ಪದ ಪಿಂಚಣಿದಾರರ ಪರವಾಗಿ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಧ್ವನಿ ಎತ್ತಿದರು. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಲ್ಲಿ ಯಾರೊಬ್ಬರು ವಂಚಿತರಾಗದಂತೆ ಕ್ರಮ ವಹಿಸಬೇಕು. ಇದಕ್ಕಾಗಿ ಗ್ರಾಮವಾರು ಪಿಂಚಿಣಿದಾರರ ಪಟ್ಟಿ ಸಿದ್ಧಪಡಿಸಿ ದಾಖಲಾತಿ ಪರಿಶೀಲಿಸುವ ಆಂದೋಲನ ನಡೆಸಲಿ. ಒಬ್ಬ ಅರ್ಹ ಫಲಾನುಭವಿ ಪಿಂಚಿಣಿಯಿಂದ ವಂಚಿತರಾದರೂ ನಾನು ಸುಮ್ಮನಿರುವುದಿಲ್ಲ ಎಂದು ಇಕ್ಬಾಲ್ ಹುಸೇನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕೊನೆಗೆ ಸಚಿವ ರಾಮಲಿಂಗಾರೆಡ್ಡಿರವರು ಗ್ರಾಮವಾರು ಆಂದೋಲನ ನಡೆಸುವಂತೆ ಅಪರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕು ಅನುಮಾನಾಸ್ಪದ ಪಿಂಚಿಣಿದಾರರ ಸಂಖ್ಯೆ

ತಾಲೂಕುಸಂಖ್ಯೆ
ಕನಕಪುರ 16,489
ರಾಮನಗರ7,511
ಮಾಗಡಿ12,056
ಚನ್ನಪಟ್ಟಣ14,210
ಹಾರೋಹಳ್ಳಿ4,164
ಒಟ್ಟು54,430

ಇದನ್ನೂ ಓದಿ: ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು