ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಭದ್ರತಾ ತಪಾಸಣೆಗೆ ಹೆಚ್ಚುವರಿ ಸಮಯ ಮೀಸಲಿಡುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಹೆಚ್ಚಿನ ಭದ್ರತಾ ಕ್ರಮಗಳಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ.
ಬೆಂಗಳೂರು (ಆ.11): ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಈ ವಾರ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವಾಗ ಭದ್ರತಾ ಪರಿಶೀಲನೆ ಹಾಗೂ ಇತರ ಪ್ರಕ್ರಿಯೆಗಳಿಗಾಗಿ ಹೆಚ್ಚುವರಿ ಸಮಯವನ್ನು ಮೀಸಲಿಡುವಂತೆ ಮನವಿ ಮಾಡಿದೆ.
ಹೆಚ್ಚಿದ ಭದ್ರತಾ ಕ್ರಮಗಳು:
ಆಗಸ್ಟ್ ತಿಂಗಳಲ್ಲಿ ವಿಶೇಷವಾಗಿ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಮತ್ತು ಇತರೆ ಪ್ರಕ್ರಿಯೆಗಳಿಗೆ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೆಚ್ಚಿದ ಪ್ರಯಾಣಿಕರ ದಟ್ಟಣೆ ಮತ್ತು ಹೆಚ್ಚಿದ ಭದ್ರತಾ ಕ್ರಮಗಳ ಕಾರಣದಿಂದ ಈ ವಿಳಂಬ ಉಂಟಾಗಬಹುದು. ಆದ್ದರಿಂದ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ನಿರ್ಗಮನ ಸಮಯಕ್ಕಿಂತ ಮುಂಚಿತವಾಗಿ ತಲುಪಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ತಾವು ಪ್ರಯಾಣ ಮಾಡಲಿರುವ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ತಮ್ಮ ಫ್ಲೈಟ್ ಮಾಹಿತಿಯನ್ನು ಪರಿಶೀಲಿಸಿಕೊಳ್ಳುವಂತೆ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಕೋರಿದೆ.
ಪ್ರಕಟನೆಯಲ್ಲಿ ಏನಿದೆ?
ಪ್ರಯಾಣಿಕರ ಗಮನಕ್ಕೆ: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ, ಈ ವಾರ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಜೊತೆಗೆ, ಹೆಚ್ಚಿನ ಭದ್ರತಾ ಕ್ರಮಗಳ ಕಾರಣದಿಂದ, ಆಗಸ್ಟ್ ತಿಂಗಳಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರ ತಪಾಸಣಾ ಪ್ರಕ್ರಿಯೆಗಳಲ್ಲಿ ಕೊಂಚ ವಿಳಂಬವಾಗಬಹುದು. ಆದ್ದರಿಂದ, ಪ್ರಯಾಣಿಕರು ತಮ್ಮ ವಿಮಾನ ಪ್ರಯಾಣವನ್ನು ಯೋಜಿಸುವಾಗ ಭದ್ರತಾ ಪರಿಶೀಲನೆಗೆ ಹೆಚ್ಚುವರಿ ಸಮಯವನ್ನು ಮೀಸಲಿಡಲು ಸೂಚಿಸಲಾಗಿದೆ' ಎಂದು ತಿಳಿಸಿದೆ.
ಸಮಯ ಸದುಪಯೋಗಕ್ಕೆ ವಿಭಿನ್ನ ಸೌಲಭ್ಯಗಳು:
ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಸಮಯವನ್ನು ಆಹ್ಲಾದಕರವಾಗಿ ವಿನಿಯೋಗಿಸಲು ಹಲವು ಆಯ್ಕೆಗಳಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣದಲ್ಲಿ ವ್ಯಾಪಾರ, ಆಹಾರ ಮತ್ತು ಪಾನೀಯ ಮಳಿಗೆಗಳು, ವಿಶ್ರಾಂತಿ ಲಾಂಜ್‌ಗಳು ಸೇರಿದಂತೆ ವಿವಿಧ ಸೇವೆಗಳು ಲಭ್ಯವಿವೆ. ಪ್ರಯಾಣಿಕರು ಈ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಕಾಯುವಿಕೆಯ ಸಮಯವನ್ನು ಆರಾಮವಾಗಿ ಕಳೆಯಬಹುದು.
ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು ಎಂದು ತಿಳಿಸಿರುವ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಎಲ್ಲರ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದೆ. ಈ ಪ್ರಕಟಣೆಯು ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡಿ, ಪ್ರಯಾಣದ ದಿನದಂದು ಉಂಟಾಗಬಹುದಾದ ಅನಗತ್ಯ ಗೊಂದಲಗಳನ್ನು ತಪ್ಪಿಸುವ ಉದ್ದೇಶ ಹೊಂದಿದೆ.


