ರಾಜ್ಯದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಚನ್ನಾಗಿ ಮಳೆಯಾಗಿದ್ದರಿಂದ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು, ಕಬಿನಿ, ಕಾವೇರಿ, ಹೇಮಾವತಿ ಸೇರಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ವಿಜಯಪುರ (ಸೆ.07): ಜಲಾಶಯ ತುಂಬಿದ್ದರಿಂದ ಇಂದು ಕೃಷ್ಣೆಗೆ, ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸಿದ್ದೇವೆ. ನಮ್ಮ ರಾಜ್ಯದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಚನ್ನಾಗಿ ಮಳೆಯಾಗಿದ್ದರಿಂದ ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದು, ಕಬಿನಿ, ಕಾವೇರಿ, ಹೇಮಾವತಿ ಸೇರಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು. ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಲಾಶಯಗಳು ಭರ್ತಿಯಾಗಿದ್ದರಿಂದ ರೈತರು ಸಂತಸದಿಂದಿದ್ದಾರೆ.

ರೈತರು ಖುಷಿಯಾಗಿದ್ದರಿಂದ ಸರ್ಕಾರವೂ ಖುಷಿಯಾಗಿದೆ ಎಂದರು.ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳುವ ವಿಚಾರವಾಗಿ ಮಾತನಾಡಿದ ಅವರು, ರೈತರಿಗೆ ಭೂ ಪರಿಹಾರ ಕೊಡುವ ವಿಚಾರಕ್ಕೆ ಬಾಧಿತ ರೈತರು, ಹೋರಾಟಗಾರರ ಜೊತೆ ಬೆಳಗಾವಿಯಲ್ಲಿ ಸಭೆ ನಡೆಸಿದ್ದೇವೆ. ಅವರೆಲ್ಲರೂ ಒಂದೇಬಾರಿ ಕನ್ಸಂಟ್ ಅವಾರ್ಡ್ ಮಾಡಿ ಎಂದು ತಿಳಿಸಿದ್ದಾರೆ. ಸರ್ಕಾರವೂ ಇದಕ್ಕೆ ಒಪ್ಪಿದೆ ಎಂದರು. ಮೂರು ದಿನಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ ಸಭೆ ನಡೆಸಿದ್ದು, ಈ ವಿಚಾರ ಒಂದು ಹಂತಕ್ಕೆ ಬಂದಿದೆ. ಮುಂದಿನ ವಾರದಲ್ಲಿ ನಾನು, ಡಿಕೆಶಿ, ಸಚಿವರು, ಶಾಸಕರು ಸೇರಿ ಒಂದು ದರ ನಿಗದಿ ಮಾಡುತ್ತೇವೆ.

ಖಷ್ಕಿ ಜಮೀನು, ನೀರಾವರಿ ಜಮೀನು, ನಾಲಾ‌ ಜಮೀನುಗಳಿಗೆ ಎಷ್ಟೆಷ್ಟು ಪರಿಹಾರ ಕೊಡಬೇಕು ಎಂದು ತೀರ್ಮಾನಿಸುತ್ತೇವೆ. ಇದನ್ನು ರೈತರು ಒಪ್ಪಿಕೊಳ್ಳಬೇಕು. ಯಾರೂ ಕೋರ್ಟ್‌ಗೆ ಹೋಗಬಾರದು. ಕೋರ್ಟ್‌ಗೆ ಹೋಗುವುದರಿಂದ ವಿಳಂಬವಾಗಲಿದೆ ಹೊರತು, ಯಾವ ಕೆಲಸ ಆಗುವುದಿಲ್ಲ ಎಂದು ವಿವರಿಸಿದರು. ಡ್ಯಾಂ ಅನ್ನು 519.60ಮೀ.ನಿಂದ ಮೂರನೇ ಹಂತದಲ್ಲಿ 524.26 ಮೀಟರ್‌ಗೆ ಎತ್ತರಿಸುವುದರಿಂದ 130 ಟಿಎಂಸಿ ನೀರು ಉಪಯೋಗ ಮಾಡಿಕೊಳ್ಳಲು ಅನುಕೂಲ ಆಗಲಿದೆ. ಇದರಿಂದ 173 ಟಿಎಂಸಿ ನೀರನ್ನು 6.6 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರೊದಗಿಸಬಹುದು. ಕೇಂದ್ರದಿಂದ ಗೆಜೆಟ್ ನೋಟಿಫಿಕೇಷನ್ ಆಗಿಲ್ಲ. ಅದು ಆದರೆ ಅನುಕೂಲ ಆಗಲಿದೆ. ನಾನು ಮೂರು ಬಾರಿ ಭೇಟಿ ಮಾಡಿದ್ದು, ಡಿ.ಕೆ.ಶಿವಕುಮಾರ ಅವರು ಐದು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ.

ಒಟ್ಟಾರೆಯಾಗಿ ರೈತರ ಬದುಕು ಹಸನಗೊಳಿಸುವುದು ನಮ್ಮ‌ಉದ್ದೇಶವಾಗಿದೆ. ನಾವು ಹಾಗೂ ನಮ್ಮ ಸರ್ಕಾರ ಇದೇ ಪ್ರಯತ್ನ ಮಾಡುತ್ತಿದ್ದೇವೆ. ಡೋಣಿ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಹೂಳು ತುಂಬಿ ನೀರಿನ‌ ಪ್ರವಾಹ ಉಂಟಾಗುತ್ತಿರುವ ಬಗ್ಗೆ ಉತ್ತರಿಸಿದ ಸಿಎಂ, ನಾವು ರೈತರ ಪರವಾಗಿ ಕೆಲಸ ಮಾಡುತ್ತೇವೆ. ಯುಕೆಪಿ ವಿಳಂಬ ವಿಚಾರದ ಕುರಿತು ಮಾತನಾಡಿದ ಅವರು, 2010ರಲ್ಲಿ ಆವಾರ್ಡ್ ಆಗಿದೆ. ಕೇಂದ್ರ ಸರ್ಕಾರಕ್ಕೆ ನಾವು ಅನೇಕ ಬಾರಿ ಒತ್ತಾಯಿಸಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರ ನೋಟಿಫಿಕೇಷನ್ ಮಾಡಬೇಕು. ನಂತರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂಬುದನ್ನು ತಿಳಿಸಿದರು.