ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಮತ್ತು ಶವಗಳ ಹೂಳುವಿಕೆ ಪ್ರಕರಣದ ತನಿಖೆಯಲ್ಲಿ ಹೊಸ ತಿರುವು. ಮುಸುಕುಧಾರಿ ಚಿನ್ನಯ್ಯ ನೀಡಿದ ಮಾಹಿತಿಯ ಮೇರೆಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸಿಕ್ಕ ಅಸ್ಥಿಪಂಜರ ಮತ್ತು ಇತರ ವಸ್ತುಗಳ ವಿಧಿವಿಜ್ಞಾನ ವರದಿ ಮುಂದಿನ ವಾರ ಬಿಡುಗಡೆಯಾಗುವ ಸಾಧ್ಯತೆ.

ಬೆಳ್ತಂಗಡಿ (ಸೆ.12): ಧರ್ಮಸ್ಥಳದಲ್ಲಿ ಅತ್ಯಾ೧ಚಾರ ಎಸಗಿ ಕೊಲೆ ಮಾಡಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಮುಸುಕುಧಾರಿ ಚಿನ್ನಯ್ಯನ ಮಾತು ನಂಬಿ ನೇತ್ರಾವತಿ ನದಿ, ಅಕ್ಕಪಕ್ಕದ ಕಾಡಿನಲ್ಲಿ 17 ಸ್ಥಳಗಳಲ್ಲಿ ನಡೆಸಿದ ಶೋಧದ ವೇಳೆ ಸಿಕ್ಕ ಕೆಲವು ಅಸ್ಥಿ ಮತ್ತು ಇನ್ನಿತರ ಅನುಮಾನಾಸ್ಪದ ವಸ್ತುಗಳ ವರದಿಯು ಮುಂದಿನ ವಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೈ ಸೇರುವ ಸಾಧ್ಯತೆ ಇದೆ. ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ವರದಿ ನೀಡಿದ ಬಳಿಕ ಎಸ್‌ಐಟಿ ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಮುಂದಿನ ವಾರವೇ ಎಫ್‌ಎಸ್‌ಎಲ್ ವರದಿ ಎಸ್‌ಐಟಿ ಕೈಗೆ?

ಸುಮಾರು 120ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನು ಎಸ್‌ಐಟಿ ಕಲೆ ಹಾಕಿತ್ತು. 17 ಸ್ಥಳಗಳಲ್ಲಿ ಸೀನ್‌ ಆಫ್‌ ಕ್ರೈಮ್‌ (ಸೋಕೋ) ತಂಡ ಸ್ಯಾಂಪಲ್ ಸಂಗ್ರಹಿಸಿತ್ತು. ಸುಮಾರು 70ಕ್ಕೂ ಹೆಚ್ಚು ಮಣ್ಣಿನ್ನು ಸಂಗ್ರಹಿಸಲಾಗಿತ್ತು. ಚಿನ್ನಯ್ಯ ತೋರಿಸಿದ ಎಲ್ಲ ಜಾಗದಲ್ಲೂ ಅಗೆದ ಬಳಿಕ ಕೆಲವು ಕಡೆ ಸಿಕ್ಕಿದ ಮೂಳೆಗಳು, ಬಟ್ಟೆ, ಬುರುಡೆ ತುಂಡು ಸೇರಿದಂತೆ ಅನುಮಾನಾಸ್ಪದ ವಸ್ತುಗಳನ್ನು ಎಸ್‌ಐಟಿ ತಂಡ ಸಂಗ್ರಹಿಸಿತ್ತು. ಕೆಂಪು ಮಣ್ಣಿನಿಂದಾಗಿ ಮೂಳೆಗಳು ಕರಗಿದ ಅನುಮಾನ ವ್ಯಕ್ತವಾಗಿದ್ದು, ಮೂಳೆ ಕರಗಿದೆಯಾ ಎಂದು ತಿಳಿಯಲು ಸ್ಯಾಂಪಲ್ ಕಲೆ ಹಾಕಲಾಗಿತ್ತು. ಬಳಿಕ ಅವುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದರ ವರದಿ ಮುಂದಿನ ವಾರ ಎಸ್‌ಐಟಿ ಕೈ ಸೇರುವ ಸಾಧ್ಯತೆ ಇದೆ.

ಡಿಎನ್‌ಎ ಸಿಗದೇ ಇದ್ದರೆ ಬುರುಡೆ ತಂಡಕ್ಕೆ ಸಂಕಷ್ಟ

ಮಣ್ಣಿನ ಸ್ಯಾಂಪಲ್‌ನಲ್ಲಿ ಡಿಎನ್‌ಎ ಸಿಕ್ಕಿದರೆ ಹೊಸ ತಿರುವು ಸಿಗಲಿದೆ. ಒಂದು ವೇಳೆ ಡಿಎನ್‌ಎ ಸಿಗದೇ ಇದ್ದರೆ ಬುರುಡೆ ತಂಡಕ್ಕೆ ಸಂಕಷ್ಟ ಎದುರಾಗಲಿದೆ. ಅಲ್ಲದೆ ಷಡ್ಯಂತರದ ಬಗ್ಗೆ ಸರಣಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈಗಾಲೇ ಬುರುಡೆ ತಂಡಕ್ಕೆ ಎಸ್‌ಐಟಿ ಗ್ರಿಲ್‌ ಮುಂದುವರಿಸಿದೆ. ಹಲವರ ಸರಣಿ ವಿಚಾರಣೆಯನ್ನೂ ನಡೆಸಲಾಗಿದೆ. ಸದ್ಯ ಎಫ್‌ಎಸ್ಎಲ್‌ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಮಟ್ಟಣ್ಣವರ್‌, ಜಯಂತ್‌ ವಿಚಾರಣೆ

ಧರ್ಮಸ್ಥಳ ಗ್ರಾಮದ ಬುರುಡೆ ಕೇಸಲ್ಲಿ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್‌ ಹಾಗೂ ಟಿ.ಜಯಂತ್‌ರ ವಿಚಾರಣೆ ಗುರುವಾರವೂ ಮುಂದುವರಿದೆ. ಮಟ್ಟಣ್ಣವರ್‌ 7ನೇ ದಿನ ಹಾಗೂ ಜಯಂತ್‌ರನ್ನು 8ನೇ ದಿನ ವಿಚಾರಣೆ ನಡೆಸಲಾಗಿದೆ.