ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ತಂಡದ ವಿಜಯೋತ್ಸವದಲ್ಲಿ ನಡೆದ ಭೀಕರ ಅವ್ಯವಸ್ಥೆ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ಹೈಕೋರ್ಟ್ ವಕೀಲ ಆರ್.ಎಲ್.ಎನ್. ಮೂರ್ತಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೆಸಿಎ ಪದಾಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾವು.
ಬೆಂಗಳೂರು (ಜೂ.5): ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಜಯ ಸಾಧಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವದ ಹೆಸರಿನಲ್ಲಿ ನಡೆದ ಭೀಕರ ಅವ್ಯವಸ್ಥೆ ಪ್ರಕರಣದಲ್ಲಿ ಇದೀಗ ಕಾನೂನು ಕ್ರಮದ ಅರಿವು ಮೂಡಿದೆ. ಹೈಕೋರ್ಟ್ ವಕೀಲ ಆರ್.ಎಲ್.ಎನ್. ಮೂರ್ತಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿರುವ ದೂರು ನೀಡಿದ್ದಾರೆ.
ವಕೀಲರ ದೂರಿನ ಪ್ರಕಾರ, ಜೂನ್ 4, 2025ರಂದು ಮಧ್ಯಾಹ್ನ 2ರಿಂದ ಸಂಜೆ 6ರ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡದ ವಿಜಯೋತ್ಸವ ನೆಪದಲ್ಲಿ ಕರ್ನಾಟಕ ಕ್ರಿಕೇಟ್ ಕ್ರೀಡಾ ಅಸೋಸಿಯೇಷನ್ನ ಪದಾಧಿಕಾರಿಗಳ, ಭದ್ರತಾ ಸಿಬ್ಬಂದಿಗಳು ಹಾಗೂ ಸಂಸ್ಥೆ ಸಂಘದ ನೌಕರ ಉದ್ದೇಶಿತ ನಿರ್ಲಕ್ಷ ಹಾಗೂ ಬೇಜವಾಬ್ದಾರಿಯಿಂದ ಸುಮಾರು 10ಕ್ಕೂ ಹೆಚ್ಚು ಮರಣ ಹೊಂದಿದ್ದು ಹಾಗೂ ಸುಮಾರು 100 ಜನಕ್ಕೂ ಅಧಿಕ ಮರಣಾಂತಿಕ ಹಲ್ಲೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ದೂರು ದಾಖಲಾದವರು ಯಾರು?
ವಿಜಯೋತ್ಸವವನ್ನು ನಿರ್ವಹಿಸಬೇಕಾದ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ನ (KCA) ಪ್ರಮುಖ ಪದಾಧಿಕಾರಿಗಳಾದ 1) ರಘುರಾಮಭಟ್ಟ.ಎ 2) ಕೆ ಶ್ರೀರಾಮ, 3) ಎ. ಶಂಕರ್, 4) ಶಿವರ ತರಪೇರೆ, 5) ಇ.ಎಸ್. ಜಯರಾಮ, 6) ಎಂ.ಎಸ್. ಕೇಶವ, 7) ಕೆ.ವಿ. ಮಂಜುನಾಥ ರಾಜು, 8) ಎಂ.ಎಸ್. ವಿನಯ್, 9) ಸಂಜಯ ಪೋಲ್, 10) ಎನ್.ಎನ್.ಯುವರಾಜ, 11) ರತ್ನಕುಮಾರ 12) ಸುಜಿತ್ ಬೊಂಹರ್, 13) ಹರಿಕೃಷ್ಣಕುಮಾರ್ ಆರ್.ಕೆ, 14) ಹೆಚ್.ಎಸ್. ಸದಾನಂದ, 15) ನಿಖಿಲ್ ಎಂ. ಬೋಷದ್, 16) ಕೆ. ಶಶಿಧರ್, 17) ದೊಡ್ಡಗಣೇಶ, 18) ಜಯಶ್ರೀ ದೊರೆಸ್ವಾಮಿ, 19) ರವಿಚಂದ್ರ ಹಾಗೂ ಇತರರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ವಿಜಯೋತ್ಸವದ ಹೆಸರಲ್ಲಿ ಸಾವು–ನೋವು
ದೂರಿನ ಪ್ರಕಾರ, ಸಾರ್ವಜನಿಕರ ಭದ್ರತೆಗಾಗಿ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಂಡಿರಲೇಬೇಕು ಎಂಬ ಹೊಣೆಗಾರಿಕೆಯನ್ನು KCA ಪದಾಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷಿಸಿದ್ದಾರೆ. ಜನಸಂದಣಿ ನಿಯಂತ್ರಣ ವಿಫಲವಾಗಿ ಹಲವಾರು ಜನರು ಕಾಲ್ತುಳಿತಕ್ಕೆ ಒಳಗಾಗಿದ್ದು, ಸ್ಥಳದಲ್ಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಗಾಯಗೊಂಡ ಹಲವರಿಗೆ ವೈದ್ಯಕೀಯ ಸಹಾಯ ತಡವಾಗಿ ದೊರಕಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಪೊಲೀಸರ ತನಿಖೆಗೆ ಆಗ್ರಹ
ವಕೀಲ ಆರ್.ಎಲ್.ಎನ್. ಮೂರ್ತಿ ತಮ್ಮ ದೂರು ಪತ್ರದಲ್ಲಿ, ಈ ಘಟನೆಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶದ ಹತ್ರಸ್ ಜಿಲ್ಲೆಯಲ್ಲಿ 21-09-2024 ರಂದು ನಡೆದ ಈ ರೀತಿಯ ಪ್ರಕರಣದ ಉದಾಹರಣೆಯನ್ನೂ ಕೊಟ್ಟಿದ್ದಾರೆ (FIR ಸಂಖ್ಯೆ 427/2024, ಸಿಖಂದರ್ ರಾವ್ ಪೊಲೀಸ್ ಠಾಣೆ). ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೂ ಈ ದೂರಿನ ಪ್ರತಿಯನ್ನು ರವಾನಿಸಿದ್ದಾರೆ. ಜೊತೆಗೆ, ಮೃತರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕೂಡ ವಕೀಲರು ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಜನರ ಪ್ರಾಣದ ಕುರಿತು ನಿರ್ಲಕ್ಷ್ಯ ತೋರಿದವರಿಗೆ ಕಾನೂನುಬದ್ಧ ಶಿಕ್ಷೆ ನೀಡಬೇಕು ಎಂದು ಪತ್ರದ ಮೂಲಕ ಆಗ್ರಹ ಮಾಡಿದ್ದಾರೆ.


