ಖಾಸಗಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಸುತ್ತಾ ಸರ್ಕಾರಾ? ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ, ಮುಜರಾಯಿ ಇಲಾಖೆ ಅಡಿಯಲ್ಲಿ 35 ಸಾವಿರ ದೇವಸ್ಥಾನಗಳಿವೆ ಎಂದಿರುವ ಸಚಿವರು, ಯಾವ ದೇವಾಲಯಗಳನ್ನು ಸರ್ಕಾರ ಕೈವಶ ಮಾಡಲಿದೆ ಅನ್ನೋ ಕುರಿತು ವಿವರಣೆ ನೀಡಿದ್ದಾರೆ.
ರಾಮನಗರ (ನ.01) ರಾಜ್ಯದ ಕಳೆದ ಹಲವು ದಿನಗಳಿಂದ ಖಾಸಗಿ ದೇವಸ್ಥಾನಗಳನ್ನು ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳುವ ಹುನ್ನಾರ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ಇದೀಗ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಪ್ರಮುಖವಾಗಿ 50ಕ್ಕೂ ಹೆಚ್ಚು ಖಾಸಗಿ ದೇವಸ್ಥಾನಗಳನ್ನು ಸರ್ಕಾರದ ವ್ಯಾಪ್ತಿಗೆ ತರುವ ಪ್ರಯತ್ನ ನಡೆಯುತ್ತಿದೆ ಅನ್ನೋ ವಿಚಾರ ಕುರಿತು ಮಾತನಾಡಿದ ರಾಮಲಿಂಗರೆಡ್ಡಿ, ಅದೆಲ್ಲಾ ಸುಳ್ಳು. ಯಾರೋ ಸುಳ್ಳು ಮಾಹಿತಿ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವ ಖಾಸಗಿ ದೇವಾಲಯ ಸರ್ಕಾರದ ವ್ಯಾಪ್ತಿಗೆ?
ಸರ್ಕಾರ ಯಾವುದೇ ಖಾಸಗಿ ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ಉದ್ದೇಶ ಹೊಂದಿಲ್ಲ. ಆದರೆ ಖಾಸಗಿ ದೇವಾಲಯ,ಆಡಳಿತ ಮಂಡಳಿ, ಸದಸ್ಯರು ಕಿತ್ತಾಡಿಕೊಂಡು ಕೋರ್ಟ್, ಕಚೇರಿ ಎಂದು ಹೋದರೆ, ಸಮಸ್ಯೆಗಳು ಬಗೆಹರಿಯದೇ ವಿವಾದ ಹೆಚ್ಚಾದರೆ ಅಂತಹ ದೇವಲಾಯಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುತ್ತದೆ. ಇದನ್ನು ಹೊರತುಪಡಿಸಿದರೆ ಯಾವುದೇ ದೇವಸ್ಥಾನಗಳನ್ನು ಸರ್ಕಾರ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುವುದಿಲ್ಲ ಎಂದು ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಸುಪರ್ದಿಯಲ್ಲಿ 35 ಸಾವಿರ ದೇವಸ್ಥಾನ
ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಸುಪರ್ದಿಯಲ್ಲಿ 35,000 ದೇವಸ್ಥಾಗಳಿವೆ. ಎ, ಬಿ, ಸಿ ಗ್ರೇಡ್ ದೇವಸ್ಥಾನಗಳು ನಮ್ಮಲ್ಲಿದೆ. ಸರ್ಕಾರ ಸದ್ಯ ಖಾಸಗಿ ದೇವಸ್ಥಾನಗಳನ್ನು ಕೈವಶ ಮಾಡುವ, ಸುಪರ್ದಿಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಮಾಡಿಲ್ಲ. ಮೊನ್ನೆ ಬಿಜಾಪುರಕ್ಕೆ ಹೋಗಿದ್ದೆ, ಅಲ್ಲಿ ಯಾರೋ ಮಿಸ್ ಗೈಡ್ ಮಾಡಿದ್ದಾರೆ ಎಂದು ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸಂಘ ಸಂಸ್ಥೆಗಳಿಗೆ 100 ದೇವಸ್ಥಾನ ಕೊಡುತ್ತೇವೆ
ನಮಗೆ ಯಾವುದೇ ಖಾಸಗಿ ದೇವಾಲಯಗಳು ಬೇಡ. ಸಂಘ ಸಂಸ್ಥೆಗಳಿಗೆ, ಮಠಗಳಿಗೆ ಬೇಕಿದ್ದರೆ 100 ದೇವಸ್ಥಾನ ಕೊಡುತ್ತೇವೆ. ಅವರು ಅಭಿವೃದ್ಧಿ ಮಾಡಿ ವಾಪಸ್ಸ್ ಕೊಡಲಿ. ನಾವು ದೇವಸ್ಥಾನಗಳ ವಿಚಾರದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ನಿರ್ಧಾರಗಳನ್ನು ಕೈಗೊಂಡಿದ್ದೇವೆ ಎಂದು ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆ, ನವೆಂಬರ್ ಕ್ರಾಂತಿ ಕುರತು ರಾಮನಗರದಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. ನವೆಂಬರ್ 21ಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಅನ್ನೋ ಚರ್ಚೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಲಿಂಗರೆಡ್ಡಿ, ಇಂದು ಕನ್ನಡ ರಾಜ್ಯೋತ್ಸೋವ. ರಾಜ್ಯೋತ್ಸವ ಬಿಟ್ಟು ಬೇರೆ ಮಾತನಾಡಲ್ಲ. ಇವತ್ತು ಯಾವುದೇ ರಾಜಕೀಯ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


