ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ 30 ಹಿರಿಯ ಜಾನಪದ ಕಲಾವಿದರು ಹಾಗೂ ಜಾನಪದ ಕ್ಷೇತ್ರ ತಜ್ಞ ಪ್ರಶಸ್ತಿಗೆ ಇಬ್ಬರು ತಜ್ಞರು ಭಾಜನರಾಗಿದ್ದಾರೆ. 2024ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಎರಡು ಕೃತಿಗಳು ಆಯ್ಕೆಗೊಂಡಿವೆ.

ಬೆಂಗಳೂರು (ಡಿ.24): ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ 30 ಹಿರಿಯ ಜಾನಪದ ಕಲಾವಿದರು ಹಾಗೂ ಜಾನಪದ ಕ್ಷೇತ್ರ ತಜ್ಞ ಪ್ರಶಸ್ತಿಗೆ ಇಬ್ಬರು ತಜ್ಞರು ಭಾಜನರಾಗಿದ್ದಾರೆ. 2024ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಎರಡು ಕೃತಿಗಳು ಆಯ್ಕೆಗೊಂಡಿವೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್‌ ಅವರು, ಕಲಾವಿದರಿಗೆ ನೀಡುವ ವಾರ್ಷಿಕ ಗೌರವ ಪ್ರಶಸ್ತಿಗೆ ತಲಾ 25 ಸಾವಿರ ನಗದು, ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ 50 ಸಾವಿರ ನಗದು ಹಾಗೂ ಪುಸ್ತಕ ಬಹುಮಾನಿತರಿಗೆ ತಲಾ 25 ಸಾವಿರ ರು.ಪ್ರಶಸ್ತಿ, ಸ್ಮರಣಿಕೆ, ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಜಾನಪದ ಕ್ಷೇತ್ರ ತಜ್ಞ ಪ್ರಶಸ್ತಿ; ಡಾ.ಜೀಶಂ.ಪ ತಜ್ಞ ಪ್ರಶಸ್ತಿಗೆ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ(ತುಮಕೂರು) ಮತ್ತು ಡಾ.ಬಿ.ಎಸ್‌.ಗದ್ದಗಿಮಠ ತಜ್ಞ ಪ್ರಶಸ್ತಿಗೆ ಡಾ.ಎಚ್‌.ಟಿ.ಪೋತೆ (ಕಲಬುರಗಿ) ಅವರು ಭಾಜನರಾಗಿದ್ದಾರೆ.

ವಾರ್ಷಿಕ ಪ್ರಶಸ್ತಿ: ಬೆಂಗಳೂರು ನಗರದ ಸಿದ್ದರಾಜು (ನೀಲಗಾರರ ಪದ ಮತ್ತು ತಂಬೂರಿ ಪದಗಳು), ಬೆಂಗಳೂರು ಗ್ರಾಮಾಂತರದ ಬಚ್ಚಮ್ಮ(ಸೋಬಾನೆ ಪದ), ರಾಮನಗರದ ಬಿ.ಸಿದ್ದರಾಜು (ಜಾನಪದ ಗಾಯನ), ಕೋಲಾರದ ಸೀತಮ್ಮ (ತತ್ವಪದ), ಚಿಕ್ಕಬಳ್ಳಾಪುರದ ಕೆ.ಎಂ. ನಾರಾಯಣಸ್ವಾಮಿ (ಕೀಲು ಕುದುರೆ), ತುಮಕೂರಿನ ರೇವಣ್ಣ (ಅಲಗು ಕುಣಿತ), ದಾವಣಗೆರೆಯ ಜಿ.ಪರಮೇಶ್ವರಪ್ಪ ಕತ್ತಿಗೆ (ತತ್ವಪದ), ಚಿತ್ರದುರ್ಗದ ಜಿ.ಎನ್‌.ವಿರೂಪಾಕ್ಷಪ್ಪ (ಜಾನಪದ ಸಂಗೀತ), ಶಿವಮೊಗ್ಗದ ಕೆ.ಎಸ್‌.ಲಿಂಗಪ್ಪ (ಅಂಟಿಕೆ ಪಿಂಟಿಕೆ), ಮೈಸೂರಿನ ಚನ್ನಾಜಮ್ಮ (ಸೋಬಾನೆ ಪದ), ಮಂಡ್ಯದ ಹೊನ್ನಯ್ಯ (ಕೋಲಾಟ), ಹಾಸನದ ಯೋಗೇಂದ್ರ ದುದ್ದ (ಗೀಗೀಪದ, ಲಾವಣಿ), ಚಿಕ್ಕಮಗಳುರಿನ ಎಚ್‌.ಎಂ.ರವಿ (ವೀರಗಾಸೆ), ಚಾಮರಾಜನಗರದ ಬಸವರಾಜು (ಗೊರುಕನ ನೃತ್ಯ) ಮತ್ತು ದಕ್ಷಿಣ ಕನ್ನಡದ ಸುಮತಿ ಕೊರಗ (ಕೊರಗರ ಡೋಲು) ಅವರು ಆಯ್ಕೆಯಾಗಿದ್ದಾರೆ.

ಉಡುಪಿಯ ಗುಲಾಬಿ ಗೌಡ್ತಿ (ನಾಟಿ ವೈದ್ಯ), ಕೊಡಗಿನ ಅಮ್ಮಣಿ (ಕುಡಿಯ ಜನಾಂಗದ ಹಾಡುಗಾರಿಕೆ), ಬೆಳಗಾವಿಯ ಭೀಮಪ್ಪ ಸಿದ್ದಪ್ಪ ಮುತ್ನಾಳ್‌ (ಪುರವಂತಿಕೆ), ಧಾರವಾಡದ ಪ್ರಕಾಶ ಮಲ್ಲಿಗವಾಡ (ಜಾನಪದ ನೃತ್ಯ), ವಿಜಯಪುರದ ಜ್ಯೋತಿರ್ಲಿಂಗ ಹೊನ್ನಕಟ್ಟಿ (ಜಾನಪದ ಗಾಯನ), ಬಾಲಕೋಟೆಯ ಚಂದ್ರಲಿಂಗಪ್ಪ ನಿಂಗಪ್ಪ ಬಸರಕೋಡ (ಪುರವಂತಿಕೆ), ಉತ್ತರ ಕನ್ನಡದ ಗೌರಿ ನಾಗಪ್ಪ ನಾಯ್ಕ (ಸುಗ್ಗಿ ಹಾಡುಗಳು), ಹಾವೇರಿಯ ಬಿಕ್ಷಾಪತಿ ಮೋತಿ (ಹಗಲುವೇಷ), ಗದಗದ ಕಾಶೀಮಸಾಬ ಹುಸೇನಸಾಬ (ಹೆಜ್ಜೆಮೇಳ), ಕಲಬುರ್ಗಿಯ ಭಾಗಪ್ಪ (ತತ್ವಪದ), ಬೀದರ್‌ ಜಿಲ್ಲೆಯ ಇಂದ್ರಮ್ಮ (ಮೊಹರಂ ಪದ), ರಾಯಚೂರಿನ ಯಂಕನಗೌಡ (ತತ್ವಪದ), ಕೊಪ್ಪಳದ ರಾಮಣ್ಣ (ಹಗಲುವೇಷ), ವಿಜಯನಗರದ ಕಿಂಡ್ರಿ ಲಕ್ಷ್ಮಿಪತಿ (ಸಿಡಿಗಾಡು ಸಿದ್ದರು), ಯಾದಗಿರಿಯ ಹಣಮಂತ (ತತ್ವಪದ) ಅವರು ವಾರ್ಷಿಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

2024ನೇ ಸಾಲಿನ ಪುಸ್ತಕ ಪ್ರಶಸ್ತಿ

ವಿಚಾರ ವಿಮರ್ಶೆ ವಿಭಾಗದಲ್ಲಿ ವೀರಾಸಾಬಿಹಳ್ಳಿ ಶಿವಣ್ಣ ಅವರ ‘ಕಾಡುಗೊಲ್ಲರ ಸಂಸ್ಕೃತಿ ಮತ್ತು ಕಾವ್ಯಗಳು’ ಹಾಗೂ ಸಂಶೋದನೆ ವಿಭಾಗದಲ್ಲಿ ಡಾ.ಇಮಾಮ್‌ ಸಾಹೇಬ್‌ ಹಡಗಲಿ (ಕೂಡ್ಲಗಿ) ಅವರ ‘ಕನಕಗಿರಿ ಸೀಮೆಯ ಸ್ಥಳನಾಮಗಳು’ ಕೃತಿಗಳು ಆಯ್ಕೆಯಾಗಿವೆ.