ರೈಲು, ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್‌ ಮರೆತು ಬಂದಿದ್ದರೆ, ಅದನ್ನು ಹುಡುಕಿ ಕಾಪಿಟ್ಟು ಪ್ರಯಾಣಿಕರಿಗೆ ಕೊಡುವ ರೈಲ್ವೆ ಭದ್ರತಾ ಪಡೆಯು 'ಆಪರೇಷನ್‌ ಅಮಾನತ್‌' ನಡಿ ಈ ವರ್ಷ 2.25 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿದೆ.

ಮಯೂರ್‌ ಹೆಗಡೆ

ಬೆಂಗಳೂರು (ಡಿ.24): ರೈಲು, ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್‌ ಮರೆತು ಬಂದಿದ್ದರೆ, ಅದನ್ನು ಹುಡುಕಿ ಕಾಪಿಟ್ಟು ಪ್ರಯಾಣಿಕರಿಗೆ ಕೊಡುವ ರೈಲ್ವೆ ಭದ್ರತಾ ಪಡೆಯು (ಆರ್‌ಪಿಎಫ್‌) 'ಆಪರೇಷನ್‌ ಅಮಾನತ್‌’ ನಡಿ ಈ ವರ್ಷ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ₹ 2.25 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿದೆ. ಇದು ಒಂದರ್ಥದಲ್ಲಿ ಮರೆಗುಳಿ ಪ್ರಯಾಣಿಕರ ಸಲುವಾಗಿಯೇ ಆರ್‌ಪಿಎಫ್‌ ಕೈಗೊಂಡ ವಿಶೇಷ ಕಾರ್ಯಾಚರಣೆ! ಅಂತವರಿಗೆ ರಾಜ್ಯದಲ್ಲಿ ಪ್ರತಿ ತಿಂಗಳು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಲಾಗುತ್ತಿದೆ. ಬಟ್ಟೆಬರೆ, ವಾಲೆಟ್‌, ದಾಖಲೆಗಳು, ಎಲೆಕ್ಟ್ರಾನಿಕ್‌ ಉಪಕರಣ ಒಳಗೊಂಡ ಬ್ಯಾಗ್‌ಗಳನ್ನು ಪ್ರಯಾಣಿಕರಿಗೆ ಮರಳಿಸಿದ್ದೇವೆ. ಇದಕ್ಕಾಗಿಯೇ ಠಾಣೆಯಲ್ಲಿ ಕೆಲವರನ್ನು ನಿಯೋಜಿಸಿಬಿಟ್ಟಿದ್ದೇವೆ ಎಂದು ರೈಲ್ವೆ ಪೊಲೀಸರು ಹೇಳುತ್ತಾರೆ.

ಡಿಸೆಂಬರ್‌ವರೆಗೆ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗದ ವಿವಿಧ ಆರ್‌ಪಿಎಫ್‌ ಠಾಣೆಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಲ್ಲಿ ₹ 26 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುವನ್ನು ಪ್ರಯಾಣಿಕರೆ ವಾಪಸ್‌ ನೀಡಿದ್ದಾರೆ. ಕೇವಲ ₹650 ಇದ್ದ ವಾಲೆಟ್‌ನಿಂದ ಹಿಡಿದು ₹ 15 ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್‌ ವರೆಗೆ ಕಳೆದುಕೊಂಡವರಿಗೂ ಆರ್‌ಪಿಎಫ್‌ ನೆರವಾಗಿದೆ. ರೈಲಿನ ವೆಸ್ಟ್ರನ್‌ ಟಾಯ್ಲೆಟ್‌ಗೆ ತೆರಳಿದ್ದ ಪ್ರಯಾಣಿಕರೊಬ್ಬರು ಕೈತೊಳೆಯುವಾಗ ₹80000 ಮೌಲ್ಯದ ಚಿನ್ನದ ಉಂಗುರ ಜಾರಿ ಒಳಗೆ ಬಿದ್ದಿತ್ತು. ಅವರು ರೈಲ್ವೆ ಮದದ್‌ ನೆರವು ಪಡೆದಾಗ ಯಶವಂತಪುರ ರೈಲ್ವೆ ಆರ್‌ಪಿಫ್‌ ಸಿಬ್ಬಂದಿ ಬಂದು ಉಂಗುರ ಮರಳಿಸಿದ್ದಾರೆ.

ಮೊಬೈಲೆ ಅಧಿಕ: ಈಚೆಗೆ ಶೇ.40ಕ್ಕಿಂತ ಹೆಚ್ಚು ಜನ ಮೊಬೈಲ್‌ ಬಿಟ್ಟವರೇ, ಅವುಗಳನ್ನು ಹುಡುಕಿಕೊಡುವಂತೆ ರೈಲ್ವೇ ಪೊಲೀಸರಿಗೆ ಮೊರೆ ಇಡುತ್ತಾರೆ. ಐಫೋನ್‌ ಸೇರಿ ದುಬಾರಿ ಮೊಬೈಲುಗಳನ್ನು ರೈಲಿನಲ್ಲಿ ಚಾರ್ಜಿಗೆ ಹಾಕುವ ಪ್ರಯಾಣಿಕರು ಅವುಗಳನ್ನು ಬಿಟ್ಟು ಇಳಿಯುತ್ತಾರೆ. ಲ್ಯಾಪ್‌ಟಾಪ್‌, ಟ್ಯಾಬ್‌, ವಾಚ್‌ಗಳನ್ನೂ ಬಿಟ್ಟು ಬರುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂದು ಬೆಂಗಳೂರು ಆರ್‌ಪಿಎಫ್‌ ಅಧಿಕಾರಿಗಳು ಹೇಳಿದರು.

ನೆರವು ಪಡೆಯೋದು ಹೇಗೆ: ‘ಆಪರೇಷನ್‌ ಅಮಾನತ್‌’ ಎರಡು ರೀತಿ ನಡೆಯುತ್ತಿದೆ. ಒಂದು, ಯಾವ ಬೋಗಿಯ ಯಾವ ಬರ್ತ್‌ನಲ್ಲಿ ಲಗೇಜ್‌ ಬಿಟ್ಟು ಬಂದಿದ್ದೇವೆ ಎಂಬುದನ್ನು ಪ್ರಯಾಣಿಕರು ರೈಲ್ವೆ ಮದದ್‌ ದೂ. ಸಂ.139 ಅಥವಾ ವೆಬ್‌ಸೈಟ್‌ (railmadad.indianrailways.gov.in) ಮೂಲಕ ಮಾಹಿತಿ ನೀಡಬೇಕು. ಆರ್‌ಪಿಎಫ್‌ ಸೆಕ್ಯೂರಿಟಿ ಕಂಟ್ರೋಲ್‌ಗೆ ಬರುವ ಈ ಮಾಹಿತಿ ಆಧರಿಸಿ ರೈಲಿನ ಮುಂದಿನ ನಿಲ್ದಾಣ ಅಥವಾ ಸನಿಹದ ನಿಲ್ದಾಣಕ್ಕೆ ರವಾನೆ ಆಗುತ್ತದೆ. ತಕ್ಷಣ ಸಿಬ್ಬಂದಿ ಅಲ್ಲಿಗೆ ತೆರಳಿ ಪ್ರಯಾಣಿಕರನ್ನು ಸಂಪರ್ಕಿಸಿ, ವಸ್ತುವಿನ (ಬಣ್ಣ, ವಸ್ತು) ಮಾಹಿತಿ ಪಡೆದು ಸಂಗ್ರಹಿಸುತ್ತಾರೆ. ಠಾಣೆಗೆ ತಂದು ಪ್ರಯಾಣಿಕರನ್ನು ಕರೆಸಿ ಅವರಿಂದ ಸೂಕ್ತ ದಾಖಲೆ ಪಡೆದು ವಸ್ತು ಹಿಂದಿರುಗಿಸುತ್ತಾರೆ. ಎರಡನೇದು ಆರ್‌ಪಿಎಫ್‌ ಸಿಬ್ಬಂದಿ ರೈಲು, ರೈಲ್ವೆ ನಿಲ್ದಾಣದಲ್ಲಿ ಗಸ್ತಿನಲ್ಲಿ ಇರುವಾಗ ಪತ್ತೆಯಾಗುವ ವಸ್ತುಗಳನ್ನು ರಕ್ಷಿಸಿ ರೈಲ್ವೆ ಆರ್‌ಪಿಎಫ್‌ ಠಾಣೆಗೆ ತರುತ್ತಾರೆ. ಅಲ್ಲಿಂದ ಕೆಲವು ರೈಲ್ವೆ ನಿಲ್ದಾಣದ ಕ್ಲಾಕ್‌ ರೂಂಗೆ ಕಳಿಸುತ್ತಾರೆ. ಅಲ್ಲಿಂದಲೂ ಪ್ರಯಾಣಿಕರು ತಮ್ಮ ವಸ್ತು ಮರಳಿ ಪಡೆಯಬಹುದು.

7 ವರ್ಷದ ನಂತರ ಬಂದಿದ್ದ ವ್ಯಕ್ತಿ!: 2018ರಲ್ಲಿ ಬೆಂಗಳೂರಿನಲ್ಲಿ ಬ್ಯಾಗ್‌ ಕಳೆದುಕೊಂಡಿದ್ದ ಭೂಪನೊಬ್ಬ ಕಳೆದ ತಿಂಗಳು ಬಂದು ‘ಬ್ಯಾಗ್‌ ಕಳೆದುಕೊಂಡಿದ್ದೆ. ಆರ್‌ಪಿಎಫ್‌ನಿಂದ ಕ್ಲಾಕ್‌ ರೂಮ್‌ನಲ್ಲಿ ಇಟ್ಟಿದ್ದಾಗಿ ಹೇಳಿದ್ದರು. ನನ್ನ ಬ್ಯಾಗ್‌ ಕೊಡಿ ಎಂದು ಕೇಳಿದ್ದಾನೆ. ಆತನ ಬಳಿ ಯಾವುದೇ ದಾಖಲೆಯೂ ಇರಲಿಲ್ಲ. ಸಿಬ್ಬಂದಿ ಹೆಚ್ಚೆಂದರೆ 3-4 ವರ್ಷ ಲಗೇಜ್‌ ಇಟ್ಟು ಕಾಯುತ್ತಾರೆ. ಬಳಿಕವೂ ಯಾರೂ ಬರದಿದ್ದರೆ ಅದನ್ನು ಸುಡಲಾಗುತ್ತದೆ. ಅಂತೆಯೇ ಈ ಪ್ರಕರಣದಲ್ಲೂ ವಿಲೇವಾರಿ ಮಾಡಿಯಾಗಿತ್ತು. ರಸೀದಿಯೂ ಇಲ್ಲದೆ, ಬ್ಯಾಗ್‌ ಕೊಡಿ ಎಂದರೆ ಹೇಗೆ ಸಾಧ್ಯ ಎಂದು ಆತನನ್ನು ವಾಪಸ್‌ ಕಳಿಸಿದ್ದಾರೆ.

ಆಪರೇಷನ್‌ ಅಮಾನತ್‌ (ನ.30ರವರೆಗೆ)

ವಿಭಾಗ ಲಗೇಜ್‌ ಮೌಲ್ಯ (ರು.ಗಳಲ್ಲಿ)
ಬೆಂಗಳೂರು 229 75.8 ಲಕ್ಷ
ಮೈಸೂರು 253 72.3 ಲಕ್ಷ
ಹುಬ್ಬಳ್ಳಿ 214 54.2 ಲಕ್ಷ
ಒಟ್ಟು 696 2.25 ಕೋಟಿ