ಭಾರತೀಯ ನೌಕಾ ದಿನಾಚರಣೆಯ ಪ್ರಯುಕ್ತ ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆಯ ನೌಕಾದಳ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರವಾರ (ಡಿ.04): ಭಾರತೀಯ ನೌಕಾ ದಿನಾಚರಣೆಯ ಪ್ರಯುಕ್ತ ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆಯ ನೌಕಾದಳ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದರು. 1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಡಿ.4ರಂದು ಕರಾಚಿಯ ಬಂದರಿನ ಮೇಲೆ ದಾಳಿ ನಡೆಸಿ ಭಾರತವು ವಿಜಯ ಸಾಧಿಸಿದ ನೆನಪಿಗೆ ಭಾರತೀಯ ನೌಕಾದಿನ ಆಚರಿಸಲಾಗುತ್ತಿದೆ. ಬ್ಯಾಂಡ್ ಸಿಬ್ಬಂದಿ ಬೀಟಿಂಗ್ ರಿಟ್ರೀಟ್ ಮೂಲಕ ನೌಕಾಪಡೆಯ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದ್ದು, ವಾದ್ಯ ಪರಿಕರಗಳಲ್ಲಿ ದೇಶಭಕ್ತಿ ಗೀತೆಗಳನ್ನು ನುಡಿಸಿದ ಬಳಿಕ ನೌಕಾಪಡೆಯ ಧ್ವಜದ ಅವರೋಹಣ ಮಾಡಲಾಯಿತು.

ಈ ವೇಳೆ ನೌಕಾಪಡೆಯ ಸಿಬ್ಬಂದಿ, ನೌಕಾ ಅಗ್ನಿವೀರರು, ನೌಕಾನೆಲೆ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕರ್ನಾಟಕ ನೌಕಾ ನೆಲೆಯ ಮುಖ್ಯಸ್ಥ ಫ್ಲ್ಯಾಗ್ ಕಮಾಂಡೆಂಟ್ ಆಫಿಸರ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್, ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ, ಜಿ. ಪಂ. ಸಿಇಓ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ಎಂ. ಎನ್. , ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹಾಗೂ ನೌಕಾಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ನೌಕಾ ನೆಲೆಯ ಮುಖ್ಯಸ್ಥ ಫ್ಲ್ಯಾಗ್ ಕಮಾಂಡೆಂಟ್ ಆಫಿಸರ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮಾಧ್ಯಮದ ಜತೆ ಮಾತನಾಡಿ, ಶ್ರೀಲಂಕಾದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನೆಲೆ ನೆರವಾಗಲು ಭಾರತ ಸರಕಾರ ರೂಪಿಸಿದ 'ಸಾಗರ ಬಂಧು' ಕಾರ್ಯಾಚರಣೆಗೆ‌ ಕದಂಬ ನೌಕಾನೆಲೆಯ ಐಎನ್ ಎಸ್ ವಿಕ್ರಾಂತ, ಐಎನ್ ಎಸ್ ಉದಯಗಿರಿ ನೌಕೆಗಳು ತೆರಳಿ ಜನರ ರಕ್ಷಣೆ ಮಾಡುತ್ತಿದೆ. ಕಾರ್ಯಾಚರಣೆಗೆ‌ ಬೇಕಾದ ಸಲಕರಣೆ, ಆಹಾರ ಸಾಮಗ್ರಿಗಳು ನೌಕೆಯಲ್ಲಿವೆ‌. ಕಾರವಾರದ ನೌಕಾನೆಲೆಯಲ್ಲಿ ಕಾಮಗಾರಿ ನಿರಂತರವಾಗಿ ನಡೆಯುತ್ತಿದ್ದು, ವಿವಿಧ ರಾಜ್ಯಗಳ ಕಾರ್ಮಿಕರು ಬರುತ್ತಿದ್ದಾರೆ. ಭದ್ರತೆ ದೃಷ್ಠಿಯಿಂದ ಅವರ ಆಧಾರ್, ದಾಖಲಾತಿ‌ ಪರಿಶೀಲನೆ ನಿರಂತರವಾಗಿ‌ ನಡೆಯುತ್ತಿದೆ. ನೌಕಾನೆಲೆ ಸಿಬ್ಬಂದಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹನಿಟ್ರ್ಯಾಪ್‌ ಮತ್ತು ಇತರ ಮೂಲಕ ಮಾಹಿತಿ ಕಳ್ಳತನಕ್ಕೆ ಕಡಿವಾಣ ಹಾಕಲು ಕಾರ್ಮಿಕರಿಗೆ ನೌಕಾನೆಲೆ ಒಳಗೆ‌ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.

ಮೀನುಗಾರರೇ ನಮ್ಮ ಕಣ್ಣುಗಳು

ಅಲ್ಲದೇ, ಯಾರೊಂದಿಗೂ ಏನನ್ನೂ ಹಂಚಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ. ಸ್ಥಳೀಯ ಮೀನುಗಾರರೊಂದಿಗೆ ಸಮನ್ವಯತೆ ಸಾಧಿಸಿ ನೌಕಾನೆಲೆಯೊಂದಿಗೆ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯಲಿದೆ. ಮೀನುಗಾರರು ನಮ್ಮ ಸಮುದ್ರಗಡಿಯ ಕಣ್ಣುಗಳು. ಅವರಿಗೆ ತೊಂದರೆ ಕೊಡುವ ಯಾವ ಉದ್ದೇಶವೂ ನೌಕಾನೆಲೆಗೆ‌ ಇಲ್ಲಿ. ಆದರೆ, ರಾಷ್ಟ್ರೀಯ ಭದ್ರತೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮೀನುಗಾರರೊಂದಿಗೆ ಸಭೆ ಮಾಡುತ್ತೇವೆ. ಮೀನುಗಾರರಿಗೆ ಯಾವುದೇ ತೊಂದರೆಯಾದರೂ ರಕ್ಷಣೆಗೆ ನೌಕಾಪಡೆ ಬದ್ಧವಾಗಿದೆ ಎಂದರು.