ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಆಯೋಜಿಸಿದ್ದ 'ಅಶೋಕ ಜನಮನ' ಕಾರ್ಯಕ್ರಮದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ. ಸಾಮರ್ಥ್ಯ ಮೀರಿ ಜನ ಸೇರಿದ್ದರಿಂದ ಉಂಟಾದ ಈ ಅವಘಡದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 11ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಕ್ಷಿಣ ಕನ್ನಡ: ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕೊಂಬೆಟ್ಟು ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ಸೋಮವಾರ ನಡೆದಿದೆ. ಅಸ್ವಸ್ಥರಾದವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದೀಪಾವಳಿ ಹಿನ್ನಲೆಯಲ್ಲಿ ರೈ ಎಸ್ಟೇಟ್ ಎಜುಕೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ತಟ್ಟೆ ಮತ್ತು ವಸ್ತ್ರ ವಿತರಣೆ ಮಾಡುವ ‘ಅಶೋಕ ಜನಮನ - 2025’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಸಾಮರ್ಥ್ಯ ಮೀರಿ ಜನಸಾಗರ

ಕ್ರೀಡಾಂಗಣದ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದರಿಂದ ಸ್ಥಳದಲ್ಲೇ ಗೊಂದಲದ ವಾತಾವರಣ ನಿರ್ಮಾಣವಾಯಿತು. ಜನಸಮೂಹದ ನೂಕುನುಗ್ಗಲಿನ ಪರಿಣಾಮವಾಗಿ ಹಲವರಿಗೆ ಉಸಿರಾಟದ ತೊಂದರೆ ಉಂಟಾಗಿ ಅಸ್ವಸ್ಥರಾದರು. ಸ್ಥಳದಲ್ಲೇ ಕುಡಿಯುವ ನೀರಿನ ಕೊರತೆ ಕಂಡುಬಂದಿದ್ದು, ಬಿಸಿಲಿನ ತಾಪಮಾನ ಹಾಗೂ ಜನಸಂದಣಿ ಜನರಲ್ಲಿ ಅಸಹನೀಯ ಪರಿಸ್ಥಿತಿಯನ್ನು ಉಂಟುಮಾಡಿತು.

ಕೆಸರು ತುಂಬಿದ್ದ ಮೈದಾನ – ಮಕ್ಕಳು ಸಹ ಸಂಕಷ್ಟದಲ್ಲಿ

ಕೆಸರು ತುಂಬಿದ್ದ ಮೈದಾನದಲ್ಲಿ ಜನರು ಚಲಿಸಲು ತೊಂದರೆ ಅನುಭವಿಸಿದರು. ತಮ್ಮ ಚಿಕ್ಕ ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಅನೇಕ ಕುಟುಂಬಗಳು ಈ ಅವ್ಯವಸ್ಥೆಯಿಂದಾಗಿ ಗಾಬರಿಗೊಂಡು ಓಡಾಡಿದ ದೃಶ್ಯಗಳು ಕಂಡುಬಂದವು. ನೂಕುನುಗ್ಗಲಿನ ಮಧ್ಯೆ ಕೆಲವರು ಜಾರಿ ಬಿದ್ದು ಗಾಯಗೊಂಡಿದ್ದಾರೆ ಎಂಬ ವರದಿಯೂ ಬಂದಿದೆ.

ತಕ್ಷಣದ ಚಿಕಿತ್ಸೆ

ಅಸ್ವಸ್ಥರಾದವರನ್ನು ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ತುರ್ತುವಾಗಿ ಸಾಗಿಸಲಾಯಿತು. ಅಲ್ಲಿ ಅವರಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಗಂಭೀರ ಜೀವಹಾನಿ ವರದಿಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನದಲ್ಲಿ ಆಗಮನ

ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಪುತ್ತೂರಿಗೆ ಆಗಮಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಸೇರಿದಂತೆ ಸಾವಿರಾರು ಅಶೋಕ್ ರೈ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುರಕ್ಷತಾ ಕ್ರಮಗಳ ಕೊರತೆ ಪ್ರಶ್ನೆ

ಕಾರ್ಯಕ್ರಮಕ್ಕೆ ಮಿತಿ ಮೀರಿ ಜನ ಬಂದಿದ್ದು, ಸಮರ್ಪಕವಾದ ಸುರಕ್ಷತಾ ಕ್ರಮಗಳು ಕೈಗೊಳ್ಳದಿರುವ ಬಗ್ಗೆ ಸ್ಥಳೀಯರ ಅಸಮಾಧಾನ ವ್ಯಕ್ತವಾಗಿದೆ. ಕ್ರೀಡಾಂಗಣದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಹಾಗೂ ಜನಸಂಚಾರ ನಿಯಂತ್ರಣದ ಕ್ರಮಗಳ ಕೊರತೆ ಕಾರಣ ನೂಕುನುಗ್ಗಲು ಉಂಟಾಯಿತು ಎಂದು ತಿಳಿದುಬಂದಿದೆ.