ಕೆಜಿಎಫ್‌ನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು 'ಸತ್ತ ಸರ್ಕಾರ' ಎಂದು ಜರೆದಿದ್ದಾರೆ. ಗ್ಯಾರಂಟಿ ಯೋಜನೆಗಳ ವೈಫಲ್ಯವನ್ನು ಟೀಕಿಸಿದ ಅವರು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಸಿದ ಏಕವಚನ ಪದ ಪ್ರಯೋಗ ತೀವ್ರವಾಗಿ ಖಂಡಿಸಿದರು.

ಕೋಲಾರ, ಕೆಜಿಎಫ್(ಡಿ.11): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಸತ್ತುಹೋಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೆಜಿಎಫ್‌ನಲ್ಲಿ ನಡೆದ 'ಭೀಮ ನಡಿಗೆ' ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆಡಳಿತ ಮತ್ತು ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡಿದರು. ಕೇಂದ್ರ ವಿತ್ತ ಸಚಿವರ ಬಗ್ಗೆ ಬಳಸಿದ ಏಕವಚನ ಪದಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ 'ಸತ್ತ ಸರ್ಕಾರದ ಮುಖ್ಯಮಂತ್ರಿ:

ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಎರಡುವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬ ಪುತ್ರ ಯತೀಂದ್ರ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, 'ಅಪ್ಪ ಮುಂದುವರೆದರೆ ತನ್ನ ಜೋಳಿಗೆ ತುಂಬುತ್ತೆ ಅಂದುಕೊಂಡಿದ್ದಾರೆ ಎಂದು ಕುಟುಕಿದರು. ಸಿದ್ದರಾಮಯ್ಯ ಅವರು ತಮ್ಮ ಮಗನಷ್ಟೇ ಅಲ್ಲದೆ ಹಲವರಿಂದ ಈ ರೀತಿ ಹೇಳಿಸುತ್ತಿದ್ದಾರೆ. ಹಾಗೆ ಹೇಳಿ ಕೆಲವರ ಮಂತ್ರಿ ಪದವಿಯೇ ಹೋಗಿದೆ. ಬೆಳಗಾವಿಯಲ್ಲಿ ಸತೀಶ್ ಜಾರಕೊಹೊಳಿ ಅವರನ್ನು ಎತ್ತಿಕಟ್ಟುತ್ತಿದ್ದಾರೆಂದು ದೂರಿದರು.

16 ಬಾರಿ ಬಜೆಟ್ ಮಂಡಿಸಿದ ಕುಖ್ಯಾತ ಅರ್ಥಶಾಸ್ತ್ರಜ್ಞ:

ಸಿದ್ದರಾಮಯ್ಯನವರನ್ನು 'ಹದಿನಾರು ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ' ಎಂದು ವ್ಯಂಗ್ಯವಾಡಿದ ಸಿಂಹ, ಇವರು ಸತ್ತ ಸರ್ಕಾರದ ಮುಖ್ಯಮಂತ್ರಿ. ಸರ್ಕಾರ ಸತ್ತುಹೋಗಿದೆ. ಸತ್ತ ಸರ್ಕಾರದ ಹೆಣವನ್ನು ಸಿದ್ದರಾಮಯ್ಯ ಮುಂದೆ ಹೊರುತ್ತಿದ್ದಾರೆ, ಡಿಕೆ ಶಿವಕುಮಾರ್ ಹಿಂದೆ ಹೊರುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಟೀಕಿಸಿದರು. ಯಾರೇ ಹೊರಲಿ, ಆದರೆ ಸರ್ಕಾರ ಮಾತ್ರ ಸತ್ತೋಗಿದೆ. ಈ ಸತ್ತ ಸರ್ಕಾರವನ್ನು ತೊಲಗಿಸಲು ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ. ನೂರ ನಲವತ್ತು ಸೀಟು ಕೊಟ್ಟ ಜನರು ಮಾಡಿದ ತಪ್ಪಿಗೆ ಜನರು ಮತ್ತು ಮೈಮರೆತ ಬಿಜೆಪಿಯವರು ಅನುಭವಿಸಬೇಕು ಎಂದರು.

ಪಂಚ ಗ್ಯಾರಂಟಿ ಯೋಜನೆಗಳ ವೈಫಲ್ಯ

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ವೈಫಲ್ಯದ ಬಗ್ಗೆ ವ್ಯಂಗ್ಯವಾಡಿದ ಪ್ರತಾಪ್ ಸಿಂಹ ಅವರು 'ನಿನ್ನ‌ ಹೆಂಡತಿಗೂ ಪ್ರೀ ಅಂತ ಹೇಳಿ ಬರೀ ತಮಟೆ ಹೊಡೆಯುತ್ತಿದ್ದಾರೆ. ಹಾಲಿನ ಬಿಲ್ ಜಾಸ್ತಿ ಆಯ್ತು, ಬಸ್ ವ್ಯವಸ್ಥೆ ಹಾಳಾಯ್ತು, ಗೃಹ ಲಕ್ಷ್ಮಿ ಹಣ ಬರ್ತಿಲ್ಲ' ಎಂದು ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ಅಲ್ಲದೆ, ರಾಜ್ಯದ ಅರ್ಥ ವ್ಯವಸ್ಥೆ ಹಾಳುಮಾಡಿ, ಎಂಟು ಲಕ್ಷ‌ ಕೋಟಿ ಸಾಲ ಮಾಡಿದ ಕುಖ್ಯಾತಿ ಸಿದ್ದರಾಮಯ್ಯ ಅವರಿಗಿದೆ ಎಂದು ಆರ್ಥಿಕ ನಿರ್ವಹಣೆಯ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯಗೆ 'ಯಾವನೋ ಅವನು' ಅಂದ್ರೆ ಹೇಗಿರುತ್ತೆ?

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಿದ್ದರಾಮಯ್ಯ ಅವರು ಏಕವಚನದಲ್ಲಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದ ಪ್ರತಾಪ್ ಸಿಂಹ, ನೀವು ಒಬ್ಬ ಹಣಕಾಸು ಸಚಿವರಾಗಿ ಕೇಂದ್ರದ ಹಣಕಾಸು ಸಚಿವರ ಹೆಸರು ಗೊತ್ತಿಲ್ಲವೇ? ಗೊತ್ತಿದ್ದರೂ ಈ ರೀತಿ ಉಢಾಪೆ ಮಾತಾಡಿದ್ರಾ? ಎಂದು ಪ್ರಶ್ನಿಸಿದರು. ನಾವು ನಿಮ್ಮನ್ನ 'ಯಾವೊನೋ ಅವನು ಮುಡಾದಲ್ಲಿ ಹೆಂಡತಿ ಹೆಸರಲ್ಲಿ 14 ಸೈಟ್ ಹೊಡೆದೋನು ಯಾವೋನೋ' ಅಂದರೆ‌ ನಿಮಗೆ ಹೇಗಾಗುತ್ತೆ. ಕೇಂದ್ರ ಸಚಿವೆ ಹೆಣ್ಣು ಮಗಳ ಬಗ್ಗೆ ಹೀಗೆ ಮಾತಾಡಿ ಸಮಾಜಕ್ಕೆ ಯಾವ ಮೇಲ್ಪಂಕ್ತಿ ಹಾಕಿ ಕೊಡುತ್ತಿದ್ದೀರಿ‌ ಎಂದು ಕಿಡಿಕಾರಿದರು ಇದೇ ವೇಳೆ ದ್ವೇಷ ಬಾಷಣ ಬಿಲ್ ಪಾಸ್ ಆದರೆ, ಮೊದಲ ಪ್ರಕರಣ ಸಿದ್ದರಾಮಯ್ಯ ಅವರ ಮೇಲೆ ಹಾಕಬೇಕು. ದೇಶದ ಹೆಣ್ಣು ಮಗಳ ಬಗ್ಗೆ ಅಗೌರವ ತೋರಿರುವ ಸಿದ್ದರಾಮಯ್ಯ ಮೇಲೆ ಕೇಸ್ ದಾಖಲು ಮಾಡಬೇಕು ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.