ಕೋಲಾರ ಮತ್ತು ಬೀದರ್ ಜಿಲ್ಲಾಧಿಕಾರಿ ಕಚೇರಿಗಳಿಗೆ ಇಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಬಂದಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಸ್ಫೋಟಿಸುವುದಾಗಿ ಹೇಳಲಾಗಿದ್ದು, ಚೆನ್ನೈ ಮೂಲದ ಬಾಲಕಿಯ ಹೆಸರಿನಲ್ಲಿ ಮೇಲ್ ಬಂದಿದ್ದು, ಎರಡೂ ಜಿಲ್ಲೆಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿ, ಬಾಂಬ್ ನಿಗ್ರಹ ದಳದಿಂದ ತಪಾಸಣೆ.

ಕೋಲಾರ (ಡಿ.12): ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಇಂದು ಬೆಳಿಗ್ಗೆ ಬಾಂಬ್ ದಾಳಿಯ ಬೆದರಿಕೆ ಬಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇಂದು ಬೆಳಿಗ್ಗೆ 6:15 ಕ್ಕೆ ಜಿಲ್ಲಾಧಿಕಾರಿಯ ಅಧಿಕೃತ ಇಮೇಲ್ ಖಾತೆಗೆ ಈ ಬೆದರಿಕೆ ಸಂದೇಶವು ಬಂದಿದ್ದು, ಅದರ 'ವಿಷಯ ಕಾಲಂ' (Subject Column) ನಲ್ಲಿ ಸ್ಪಷ್ಟವಾಗಿ 'ಬಾಂಬ್ ಬ್ಲಾಸ್ಟ್ ಮಾಡುತ್ತೇವೆ' ಎಂದು ಉಲ್ಲೇಖಿಸಲಾಗಿದೆ. ಈ ಸಂದೇಶದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಇಷ್ಟೇ ಅಲ್ಲದೆ, ಕೋಲಾರ ಮತ್ತು ಬೀದರ್ ಜಿಲ್ಲಾಧಿಕಾರಿ ಕಚೇರಿಗಳ ಮೇಲೆ ದಾಳಿ ನಡೆಸುವುದಾಗಿ ಬ್ಲಾಸ್ಟ್‌ ಮಾಡಲು ಐದು RDX ಪ್ಲಾಂಟ್‌ಗಳು ಕೋಲಾರ ಹಾಗೂ ಬೀದರ್‌ನಲ್ಲಿ ಇರುವುದಾಗಿ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

'Harna abdul shaik' ಎಂಬ ಹೆಸರಿನಲ್ಲಿ ಬಂದಿರುವ ಈ ಇಮೇಲ್, ಚೆನ್ನೈ ಮೂಲದ 13 ವರ್ಷದ ಬಾಲಕಿಯ ಹೆಸರಿನಲ್ಲಿ ಇರುವುದು ಗಮನಾರ್ಹ. ಈ ಮೆಸೇಜ್ ಬಾಲಕಿಯ ಮೇಲೆ ತಮಿಳುನಾಡಿನಲ್ಲಿ ನಡೆದ ಲೈಂಗಿಕ ಕಿರುಕುಳದ ಬಗ್ಗೆಯೂ ಉಲ್ಲೇಖಿಸಿದೆ. 'I AM HARNA FROM MYLAPURA, CHENNAI ಎಂದು ಬರೆದಿರುವ ಇಮೇಲ್‌ನಲ್ಲಿ, ಚೆನ್ನೈನ ಮೈಲಾಪುರ ಕ್ಷೇತ್ರದ ಮಾಜಿ ಶಾಸಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದೆ. ಜೊತೆಗೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಸಹಾಯ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಬಾಂಬ್‌ ಬೆದರಿಕೆ: ಅಲರ್ಟ್ ಆದ ಕೋಲಾರ ಜಿಲ್ಲಾಡಳಿತ:

ಬೆದರಿಕೆ ಇಮೇಲ್ ಬಂದ ತಕ್ಷಣವೇ ಎಚ್ಚೆತ್ತ ಕೋಲಾರ ಜಿಲ್ಲಾಡಳಿತ, ತಕ್ಷಣವೇ ಬಾಂಬ್ ನಿಗ್ರಹ ದಳವನ್ನು ಸ್ಥಳಕ್ಕೆ ಕರೆಸಿದೆ. ಪ್ರಸ್ತುತ, ಕೋಲಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಯಾವುದೇ ರೀತಿಯ ಅಪಾಯಕಾರಿ ವಸ್ತುಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಾಂಬ್ ನಿಗ್ರಹ ದಳದ ತಂಡವು ಸಂಪೂರ್ಣ ಪರಿಶೀಲನೆಯನ್ನು ಆರಂಭಿಸಿದೆ.

ಬೀದರ್ ಡಿಸಿ ಕಚೇರಿಗೂ ಬಂತು ಇಮೇಲ್ ಬಾಂಬ್!

ಬೀದರ್ ನಗರದ ಚಿಕ್ಕಪೇಠ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಬೆಳಗ್ಗೆ ಇ-ಮೇಲ್ ಮೂಲಕ ಬಾಂಬ್ ಹಾಕುವ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಕಚೇರಿ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಹೈ ಅಲರ್ಟ್ ಘೋಷಿಸಿ, ಕಚೇರಿ ಸಿಬ್ಬಂದಿಯನ್ನ ಹೊರಗೆ ಕಳುಹಿಸಿ ಕಚೇರಿಯನ್ನ ಸಂಪೂರ್ಣ ಪರಿಶೀಲನೆ ನಡೆಸಿದರು, ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ತೀವ್ರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ಎಎಸ್ಪಿ ಚಂದ್ರಕಾಂತ್ ಪೂಜಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಆಗಮಿಸಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.