ಕೆಜಿಎಫ್, ಕಾಂತಾರದಂತಹ ಯಶಸ್ಸಿನ ನಂತರ ಕನ್ನಡ ಚಿತ್ರರಂಗವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೊಸ ಸಿನಿಮಾಗಳ ನಿರ್ಮಾಣ ಗಣನೀಯವಾಗಿ ಕುಸಿದಿದ್ದು, ಬದಲಾದ ಪ್ರೇಕ್ಷಕರ ಅಭಿರುಚಿ, ಸಬ್ಸಿಡಿ ನಿಲ್ಲುವ ಭೀತಿ ಮತ್ತು ನಿರ್ಮಾಪಕರ ಅಧೈರ್ಯದಿಂದಾಗಿ ಉದ್ಯಮವು ಸ್ತಬ್ಧವಾಗುವತ್ತ ಸಾಗಿದೆ. 

ಪ್ರಿಯಾ ಕೆರ್ವಾಶೆ

 ಬೆಂಗಳೂರು (ಏ.25): ವಿಶ್ವವೇ ತಿರುಗಿ ನೋಡುವಂತೆ ‘ಕೆಜಿಎಫ್‌’, ‘ಕಾಂತಾರ’ದಂತಹ ಸಿನಿಮಾಗಳನ್ನು ಕೊಟ್ಟ ಸ್ಯಾಂಡಲ್‌ವುಡ್‌ ಚಟುವಟಿಕೆಯನ್ನೇ ಮರೆತು ಸ್ತಬ್ಧವಾಗುವತ್ತ ದಾಪುಗಾಲು ಇಟ್ಟಿದೆ. ಈ ವರ್ಷದ ಆರಂಭದಿಂದ ಅಲ್ಲೊಂದು ಇಲ್ಲೊಂದು ಸಿನಿಮಾ ಶುರುವಾಗುತ್ತಿರುವ ಸುದ್ದಿ ಬಿಟ್ಟರೆ ಉಳಿದಂತೆ ನಿರ್ವಾತ ಆವರಿಸಿತೊಡಗಿದೆ.

ಕೋವಿಡ್‌ ನಂತರ ಕುಸಿಯುತ್ತಲೇ ಬಂದ ಸಿನಿಮಾಗಳ ಸಂಖ್ಯೆ ಈಗ ನಿಂತೇ ಹೋಗಿದೆ ಅನ್ನುವ ಹಂತ ತಲುಪಿದೆ. ಹಳೆ ಸಿನಿಮಾಗಳ ಸ್ಟಾಕ್‌ ಬಹುತೇಕ ಕ್ಲಿಯರ್‌ ಆಗಿದೆ. ಹೊಸ ಸಿನಿಮಾಗಳು ಆರಂಭವಾಗುತ್ತಿಲ್ಲ. ಒಂದೆರಡು ವರ್ಷಗಳ ಹಿಂದೆ ವಾರಕ್ಕೆ ಮೂರ್ನಾಲ್ಕು ಸಿನಿಮಾಗಳು ಆರಂಭವಾಗುತ್ತಿದ್ದವು. ಆದರೆ ಈಗ ತಿಂಗಳಿಗೆ ಒಂದೋ ಎರಡೋ ಮುಹೂರ್ತ ನಡೆದರೆ ಹೆಚ್ಚು. ಅದರಲ್ಲಿ ಸ್ಟಾರ್‌ ಸಿನಿಮಾಗಳಾಗಲೀ, ಗಮನಸೆಳೆಯುವಂಥಾ ಚಿತ್ರಗಳಾಗಲೀ ಇಲ್ಲವೇ ಇಲ್ಲ!

ಈ ಬಗ್ಗೆ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್‌, ‘ಭಾರತೀಯ ಸಿನಿಮಾ ರಂಗದಲ್ಲೇ ಮೊದಲ ಪ್ರಚಾರಕರ್ತರು ನಾವು. ಚಿತ್ರರಂಗದಲ್ಲಿ ಇಂತಹ ಚಲನಹೀನ ಸ್ಥಿತಿ ನೋಡುತ್ತಿರುವುದು ಇದೇ ಮೊದಲು’ ಎನ್ನುತ್ತಾರೆ.

ಕಳೆದ ವರ್ಷ ಏಪ್ರಿಲ್‌, ಮೇ ಹೊತ್ತಿಗೆ ಸುಮಾರು 40ರಷ್ಟು ಸಿನಿಮಾಗಳು ಆರಂಭಗೊಂಡಿದ್ದವು. ಅದರ ಹಿಂದಿನ ವರ್ಷಗಳಲ್ಲೂ ಹೆಚ್ಚು ಕಡಿಮೆ ಇಷ್ಟೇ ಸಿನಿಮಾಗಳ ಮುಹೂರ್ತವಾಗಿತ್ತು. ಆದರೆ ಈ ಬಾರಿ ಮುಹೂರ್ತ ಮಾಡಿಕೊಂಡ ಒಟ್ಟು ಕನ್ನಡ ಸಿನಿಮಾಗಳ ಸಂಖ್ಯೆ ಕೇವಲ 18!

ಪ್ರಚಾರಕರ್ತ ಹರೀಶ್‌ ಅರಸ್‌, ‘ಕಳೆದ ವರ್ಷ ಜನವರಿಯಿಂದ ಏಪ್ರಿಲ್‌ ಹೊತ್ತಿಗೆ ನಮ್ಮ ಪಿಆರ್ ಕಂಪನಿಯಿಂದ 20ರಷ್ಟು ಹೊಸ ಸಿನಿಮಾಗಳಿಗೆ ಚಾಲನೆ ಸಿಕ್ಕಿತ್ತು. ಈ ವರ್ಷ ಕೇವಲ ಮೂರು ಸಿನಿಮಾಗಳಷ್ಟೇ ಮುಹೂರ್ತ ಮಾಡಿಕೊಂಡಿವೆ’ ಎನ್ನುತ್ತಾರೆ.

ಬದಲಾದ ಪ್ರೇಕ್ಷಕನ ಅಭಿರುಚಿಯನ್ನು ಗುರುತಿಸಲು ಚಿತ್ರರಂಗ ಸೋತಿರುವುದು ಈ ಅಧಃಪತನಕ್ಕೆ ಮೊದಲ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಅತೀ ಅಪರೂಪಕ್ಕೆ ಸ್ಟಾರ್‌ ಸಿನಿಮಾ ಬಂದರೂ ಅದರಲ್ಲಿ ಹೊಸತನ, ಕಥೆ ಇಲ್ಲವಾದರೆ ಪ್ರೇಕ್ಷಕ ಥೇಟರಿಗೆ ಬಂದು ದುಡ್ಡು ದಂಡ ಮಾಡೋದಿಲ್ಲ. ಆದರೆ ಇದರ ಪರಿಣಾಮ ನಿರ್ಮಾಪಕ ಹಣ ಹೂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೇ ವೇಳೆ, ನಿರ್ಮಾಪಕರ ಅಧೈರ್ಯಕ್ಕೆ ಸಬ್ಸಿಡಿ ನಿಂತುಹೋಗುತ್ತದೆ ಎಂಬ ವದಂತಿಯೂ ಕಾರಣ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾತನಾಡುವ ಕನ್ನಡ ಫಿಲಂ ಚೇಂಬರ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಕೃಷ್ಣೇಗೌಡ, ‘ಸದ್ಯ ಕನ್ನಡ ಸಿನಿಮಾರಂಗದ ನಿರ್ಮಾಪಕ ಸೋತು ಹೈರಾಣಾಗಿದ್ದಾನೆ. ಗಾಯದ ಮೇಲೆ ಬರೆ ಎಳೆದಂತೆ 2025ರ ನಂತರ ಬರುವ ಸಿನಿಮಾಗಳಿಗೆ ಸಬ್ಸಿಡಿ ಸಿಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕನ್ನಡ ಚಿತ್ರರಂಗವನ್ನು ಉದ್ಯಮವೆಂದು ಪರಿಗಣಿಸಿರುವ ಕಾರಣ ಸಬ್ಸಿಡಿ ಬೇಡ ಎಂಬ ಮಾತುಕತೆ ಅಧಿಕಾರಿ ವರ್ಗದಲ್ಲಿ ನಡೆದಿದ್ದು ಇದು ನಿರ್ಮಾಪಕರ ವಲಯದಲ್ಲಿ ನಡುಕ ಹುಟ್ಟಿಸಿದೆ. ಸದ್ಯ ನಾಲ್ಕು ವರ್ಷಕ್ಕೊಮ್ಮೆ ಬರುವ ಸ್ಟಾರ್‌ ಸಿನಿಮಾಗಳನ್ನು ನಂಬಿಕೊಂಡು ಚಿತ್ರರಂಗ ನಡೆಯಲು ಸಾಧ್ಯವಿಲ್ಲ. ಚಿತ್ರಮಂದಿರವನ್ನು ಸದಾ ಚಲನಶೀಲವಾಗಿಡುವುದು ಸಣ್ಣ ಬಜೆಟ್‌ನ ಸಾಮಾನ್ಯ ಚಿತ್ರಗಳು. ಅವುಗಳಿಗೆ ತಕ್ಕಮಟ್ಟಿನ ಆರ್ಥಿಕ ಚೈತನ್ಯ ನೀಡುವುದು ಸರ್ಕಾರದ ಸಹಾಯಧನ. ಅದನ್ನೂ ನಿಲ್ಲಿಸಿದರೆ ಕನ್ನಡ ಚಿತ್ರರಂಗ ಸಂಪೂರ್ಣ ಸ್ಥಗಿತಗೊಳ್ಳುವ ಅಪಾಯವಿದೆ’ ಎನ್ನುತ್ತಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಸುಂದರ್‌ರಾಜ್‌ ಪ್ರಕಾರ, ‘ಸ್ಟಾರ್‌ ಸಿನಿಮಾಗಳಲ್ಲಿ ಕಂಟೆಂಟ್‌ ಹೆಸರಿನಲ್ಲಿ ಹಿಂಸೆಯ ವೈಭವೀಕರಣ ನಡೆಯುತ್ತದೆ. ಆದರೆ ಅವರನ್ನೇ ಅನುಸರಿಸುವ ಚಿತ್ರೋದ್ಯಮದ ಇತರರೂ ಅಂತಹ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಇದರಿಂದ ಮೊದಲಿನ ಹಾಗೆ ಒಂದಿಡೀ ಕುಟುಂಬ ಥೇಟರಿಗೆ ಬಂದು ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ’.

ಇದರ ಜೊತೆಗೆ ಕಷ್ಟಕಾಲದಲ್ಲಿ ಸರ್ಕಾರವೂ ಕೈಚೆಲ್ಲಿ ಕುಳಿತಿರುವುದು, ಹೊರಬರುತ್ತಿರುವ ಹೊಸ ಹೊಸ ನೀತಿಗಳು ಚಿತ್ರರಂಗ ನಿರ್ಮಾಣದಿಂದ ಹಿಂದುಳಿಯುವಂತೆ ಮಾಡುತ್ತಿದೆ ಎನ್ನುತ್ತಾರೆ ಬಲ್ಲವರು.

ದುರಾದೃಷ್ಟವಶಾತ್‌ ಈ ಬೆಳವಣಿಗೆಯಿಂದ ಹೊಡೆತ ಬಿದ್ದಿರುವುದು ಕಾರ್ಮಿಕ ವರ್ಗ ಹಾಗೂ ತಾಂತ್ರಿಕ ವರ್ಗಕ್ಕೆ. ಸ್ಟಾರ್‌ ಸಿನಿಮಾಗಳ ಸೆಟ್‌, ಚಿತ್ರೀಕರಣ, ರೀರೆಕಾರ್ಡಿಂಗ್‌ ಹೆಚ್ಚಾಗಿ ನಡೆಯುವುದು ಹೊರರಾಜ್ಯ, ಹೊರದೇಶಗಳಲ್ಲಿ. ಸಾಮಾನ್ಯ ಬಜೆಟ್‌ ಸಿನಿಮಾಗಳಷ್ಟೇ ರಾಜ್ಯದ ಮಾನವ ಹಾಗೂ ತಾಂತ್ರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಚಿತ್ರೀಕರಣ ನಡೆಸಿ ಇಲ್ಲೇ ರೀರೆಕಾರ್ಡಿಂಗ್‌ ಕೆಲಸ ಮುಗಿಸಿಕೊಂಡು ಹೊರಬರುತ್ತವೆ. ಸಿನಿಮಾಗಳ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿರುವುದು ಈ ವಲಯಗಳಲ್ಲಿ ಹಾಹಾಕಾರವೆಬ್ಬಿಸಿವೆ. ಈ ಎಲ್ಲ ಬೆಳವಣಿಗೆಗಳಿಂದ ಕನ್ನಡ ಚಿತ್ರರಂಗದ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಬೇರೆ ಚಿತ್ರರಂಗಗಳ ಸ್ಥಿತಿಯೂ ಭಿನ್ನವಾಗಿಲ್ಲ

ಭಾರತೀಯ ಚಿತ್ರರಂಗದಲ್ಲೇ ಸಾಮಾನ್ಯ ಸಿನಿಮಾ ನಿರ್ಮಾಣದ ಸಂಖ್ಯೆಯಲ್ಲಿ ಭಾರೀ ಕುಸಿತ ಉಂಟಾಗುತ್ತಿದೆ. ಬಾಲಿವುಡ್‌ನಲ್ಲಿ ಹೊಸ ಸಿನಿಮಾ ಘೋಷಣೆ ಬಹಳ ಕಡಿಮೆಯಾಗಿದೆ. ತೆಲುಗು, ತಮಿಳು ಸಿನಿಮಾರಂಗಗಳಲ್ಲೂ ಇದೇ ಸ್ಥಿತಿ ಇದೆ. ಸಾಮಾನ್ಯ ಸಿನಿಮಾಗಳು ಥೇಟರ್‌ನಲ್ಲಿ ಚೇತರಿಕೆ ಕಾಣದೇ ಓಟಿಟಿ, ಸ್ಯಾಟಲೈಟ್‌ಗಳಿಂದಲೂ ತಿರಸ್ಕೃತಗೊಂಡು ಸಂಕಷ್ಟದಲ್ಲಿವೆ.

ಪ್ಯಾನ್‌ ಇಂಡಿಯಾ ಸಿನಿಮಾಗಳತ್ತ ನಿರ್ಮಾಪಕರ ಒಲವು

ಪ್ಯಾನ್‌ ಇಂಡಿಯಾ ಸಿನಿಮಾಗಳ ಕ್ರೇಜ್‌ ಜೋರಾಗಿದೆ. ಪ್ಯಾನ್‌ ಇಂಡಿಯಾ ಸಿನಿಮಾಗಳು ಮಾತ್ರ ಓಡುತ್ತವೆ ಎಂಬ ಭಾವನೆ ಅನೇಕ ನಿರ್ಮಾಪಕರಲ್ಲಿದೆ. ಹೀಗಾಗಿ ಅವರು ಪ್ರಾದೇಶಿಕ ಚಿತ್ರಕ್ಕಿಂತಲೂ ಹೆಚ್ಚು ಬಂಡವಾಳ ಹಾಕಿ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಮಲಯಾಳ ಚಿತ್ರರಂಗ ಮಾತ್ರ ಇದಕ್ಕೆ ಹೊರತಾಗಿದೆ.