ಏಷ್ಯಾನೆಟ್ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ನೇತೃತ್ವದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಅಂಗವಾಗಿ ಕೊಡಗಿನಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ನಡೆಯಿತು. 'ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ' ವಿಷಯದಡಿ ವಿದ್ಯಾರ್ಥಿಗಳು ತಮ್ಮ ಕಲ್ಪನೆಯನ್ನು ಚಿತ್ರಗಳ ಮೂಲಕ ಅದ್ಭುತಗೊಳಿಸಿದರು.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.12) : ಏಷ್ಯಾನೆಟ್ ಕನ್ನಡ ಪ್ರಭ, ಸುವರ್ಣ ನ್ಯೂಸ್ ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಅಂಗವಾಗಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ 15 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಡಿಕೇರಿಯ ಗಾಂಧಿಭವನದಲ್ಲಿ ನಡೆದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಗೆ ಐದು ತಾಲ್ಲೂಕುಗಳಲ್ಲಿ ನಡೆದ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಒಟ್ಟು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಿರಿ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪರಿಸರ ಜಾಗೃತಿಗಾಗಿ ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಕರವಾಗಿ ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಪರಿಸರ ಸಮತೋಲದಲ್ಲಿ ವನ್ಯಜೀವಿಗಳ ಪಾತ್ರ ಎಷ್ಟು ಮುಖ್ಯ ಎಂಬುದನ್ನು ವಿದ್ಯಾರ್ಥಿಗಳು ತಮ್ಮ ಕಲ್ಪನೆ ಮೂಸೆಯಲ್ಲಿ ಅದ್ಭುತವಾಗಿ ಚಿತ್ರಿಸಿ ವರ್ಣಿಸಿದ್ದರು. ಸಾಕಷ್ಟು ವಿದ್ಯಾರ್ಥಿಗಳು ಅರಣ್ಯ ಸಂಪತ್ತಿನ ಚಿತ್ರಗಳನ್ನು ಬರೆದರೆ, ಮತ್ತಷ್ಟು ವಿದ್ಯಾರ್ಥಿಗಳು ಅರಣ್ಯದಲ್ಲಿ ವಿವಿಧ ಪ್ರಾಣಿ ಸಂಕುಲಗಳ ಬದುಕಿನ ಚಿತ್ರವನ್ನು ಚಿತ್ರಿಸಿದ್ದರು. ಒಟ್ಟಿನಲ್ಲಿ ಒಂದೊಂದು ಚಿತ್ರವೂ ಅರಣ್ಯ ಸಂಪತ್ತಿನ ವಿಷಯದ ದೊಡ್ಡ ವಿಶ್ಲೇಷಣೆಯನ್ನೇ ಮಾಡುವಂತೆ ಇದ್ದವು.
ಮೂರು ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪ್ರಥಮ ಬಹುಮಾನವಾಗಿ ಎರಡು ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ. ದ್ವಿತೀಯ ಬಹುಮಾನವಾಗಿ ಒಂದುವರೆ ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ ತೃತೀಯ ಬಹುಮಾನವಾಗಿ ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಹಾಗೂ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಮಡಿಕೇರಿ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ನಿಜವಾಗಿಯೂ ವಿದ್ಯಾರ್ಥಿಗಳು ಅವರ ವಯಸ್ಸಿಗೆ ಮೀರಿದ ಅರಣ್ಯ ಸಂರಕ್ಷಣೆ ವಿಷಯಗಳನ್ನು ಚಿತ್ರಗಳ ಮೂಲಕ ಅದ್ಭುತವಾಗಿ ಮೂಡಿಸಿದ್ದಾರೆ. ಇದು ಮುಂದಿನ ಪೀಳಿಗೆಗೆ ಒಳ್ಳೆಯ ಸಂದೇಶ ನೀಡುವಂತೆ ಇವೆ. ಇಂತಹ ಒಂದು ವಿಶೇಷವಾದಂತಹ ಕಾರ್ಯಕ್ರಮವನ್ನು ಸಂಘಟಿಸಿರುವ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನವರಿಗೆ ಧನ್ಯವಾದ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಯಶಿಕಾ ರಾಜ್, ಪೋಷಕರಾದ ತೇಜಸ್ವಿನಿ ಕೂಡ ಇಂತಹ ಕಾರ್ಯಕ್ರಮ ರೂಪಿಸಿರುವುದು ನಿಜಕ್ಕೂ ನಮಗೆ ತುಂಬಾ ಪ್ರೋತ್ಸಾಹದಾಯಕ. ಇಂತಹ ಕಾರ್ಯಕ್ರಮಗಳಿಂದ ನಮಗೆ ಇನ್ನಷ್ಟು ಉತ್ತೇಜನ ನೀಡಿದಂತೆ ಆಗುತ್ತಿದ್ದು, ಕನ್ನಡ ಪ್ರಭ, ಸುವರ್ಣ ನ್ಯೂಸ್ ಗೆ ಧನ್ಯವಾದ ಎಂದಿದ್ದಾರೆ.


