ಕೊಪ್ಪಳದ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಈ ತೀರ್ಪಿನಿಂದ ತೀವ್ರ ದುಃಖಿತರಾದ ಮೃತನ ತಾಯಿ ಕೆಂಚಮ್ಮ, ಇದು ಕೊಲೆ, ಆತ್ಮಹತ್ಯೆಯಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನ್ಯಾಯಕ್ಕಾಗಿ ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ.

ಕೊಪ್ಪಳ (ಅ.3): ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಆರೋಪಿಗಳ ಖುಲಾಸೆಯಾದ ಹಿನ್ನೆಲೆಯಲ್ಲಿ, ತೀರ್ಪಿನ ವಿಷಯ ತಿಳಿಯುತ್ತಲೇ ಮೃತ ಯಲ್ಲಾಲಿಂಗನ ತಾಯಿ ಕೆಂಚಮ್ಮ ತೀವ್ರ ದುಃಖಿತರಾಗಿ ಕಣ್ಣೀರು ಹಾಕಿದರು.

ಏಶಿಯಾನೆಟ್ ಸುವರ್ಣ ನ್ಯೂಸ್ ಎದುರು ಕಣ್ಣೀರು ಹಾಕುತ್ತಾ ಮಾತನಾಡಿದ ಕೆಂಚಮ್ಮ, 'ನನ್ನ ಮಗನದ್ದು ಕೊಲೆ, ಆತ್ಮಹತ್ಯೆ ಅಲ್ಲ. ಆತನ ಬಳಿ ಸಾಕ್ಷಿಗಳಿದ್ದವು. ಭಯದಿಂದ ಕೆಲವರು ಸಾಕ್ಷಿಗಳನ್ನು ಉಲ್ಟಾ ಹೇಳಿರಬಹುದು ಕೊನೆಗೂ ನನ್ನ ಮಗನ ಸಾವಿಗೆ ನ್ಯಾಯ ಸಿಗಲಿಲ್ಲ ಎಂದು ಸೆರಗಿನಿಂದ ಕಣ್ಣೀರು ಒರೆಸಿಕೊಂಡರು.

ನಮಗೂ ಜೀವ ಭಯ:

ನಮಗೂ ಜೀವ ಭಯವಿದೆ. ಆರೋಪಿಗಳು ಮುಂದೆ ಏನು ಮಾಡುತ್ತಾರೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಕೆಂಚಮ್ಮ, ನನ್ನ ಮಗನ ಸಾವಿಗೆ ನ್ಯಾಯ ಸಿಗುವ ವಿಶ್ವಾಸವಿತ್ತು, ಆದರೆ ಅದು ಆಗಲಿಲ್ಲ. ಯಲ್ಲಾಲಿಂಗನ ಸಹೋದರ ವೀರಭದ್ರ ಆತ್ಮಹತ್ಯೆ ಎಂದು ಸಾಕ್ಷಿ ಹೇಳಿರುವುದು ಸತ್ಯವಲ್ಲ. ತಮ್ಮನ ಬಗ್ಗೆ ಆತ ಹೇಗೆ ಆ ರೀತಿ ಹೇಳುತ್ತಾನೆ? ಇದೆಲ್ಲ ಸುಳ್ಳು ಎಂದು ಆರೋಪಿಸಿದರು.

ತೀರ್ಪು ಕೊಡುವ ಮೊದಲು ನಮ್ಮನ್ನು ಕರೆದಿಲ್ಲ:

ತೀರ್ಪು ಕೊಡುವ ಮೊದಲು ನಮ್ಮನ್ನು ಕರೆದಿರಲಿಲ್ಲ. ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಸರಕಾರಿ ವಕೀಲರನ್ನು ಸಂಪರ್ಕ ಮಾಡುತ್ತೇವೆ. ಅವರು ಏನು ಹೇಳುತ್ತಾರೆ ಕೇಳಿಕೊಂಡು ಮುಂದೆ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಕೆಂಚಮ್ಮ ತಿಳಿಸಿದರು. ಈ ತೀರ್ಪಿನಿಂದ ಕುಟುಂಬಕ್ಕೆ ಆಘಾತವಾಗಿದ್ದು, ನ್ಯಾಯಕ್ಕಾಗಿ ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸುವುದಾಗಿ ಕೆಂಚಮ್ಮ ಹೇಳಿದ್ದಾರೆ.