ಅಂಕೋಲಾ ತಾಲೂಕಿನಲ್ಲಿ ಯುವಜನರಲ್ಲಿ, ವಿಶೇಷವಾಗಿ 22 ವರ್ಷದೊಳಗಿನವರಲ್ಲಿ ಎಚ್‌ಐವಿ ಸೋಂಕು ಆತಂಕಕಾರಿಯಾಗಿ ಹೆಚ್ಚುತ್ತಿದೆ. ಹದಿಹರೆಯದ ಕುತೂಹಲ, ಮೊಬೈಲ್ ಗೀಳು ಮತ್ತು ಅಸುರಕ್ಷಿತ ನಡವಳಿಕೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದೆ.

ವರದಿ: ರಾಘು ಕಾಕರಮಠ

ಅಂಕೋಲಾ: ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಎಚ್‌ಐವಿ ಸೋಂಕಿಗೆ ಒಳಗಾಗುತ್ತಿರುವವರಲ್ಲಿ ಯುವ ಜನರ ಸಂಖ್ಯೆಯೇ ಹೆಚ್ಚಾಗುತ್ತಿರುವ ಆತಂಕಕಾರಿ ಸಂಗತಿಯೊಂದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ. ತಾಲೂಕಿನಲ್ಲಿ 2025ನೇ ಸಾಲಿನ ಶೇ. 66.33 ರಷ್ಟು ಪ್ರಕರಣದಲ್ಲಿ ಯುವ ಜನತೆಯಲ್ಲೆ ಎಚ್‌ಐವಿ ಸೋಂಕು ದೃಢಪಟ್ಟಿದೆ. ಇದರಲ್ಲಿ 22 ವರ್ಷದ ಒಳಗಿನ ವಯಸ್ಸಿನ ಯುವ ಜನತೆ ಎನ್ನುವುದು ವಿಶೇಷವಾಗಿ ಗಮನ ಸೆಳೆದಿದೆ. ಅಂಕೋಲಾ ತಾಲೂಕಿನಲ್ಲಿ ಒಟ್ಟು 210 ಎಚ್‌ಐವಿ ಸೋಂಕಿತರಿದ್ದು, ಅದರಲ್ಲಿ 106 ಗಂಡು ಹಾಗೂ 104 ಮಹಿಳೆಯರಲ್ಲಿ ಎಚ್‌ಐವಿ ಇದ್ದು, ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

22ರ ವಯಸ್ಸಿನ ಒಳಗಿನವರೆ ಜಾಸ್ತಿ

ಹದಿಹರೆಯದ ಕುತೂಹಲ, ಮೋಬೈಲ ಗೀಳು ಹಾಗೂ ಮದ್ಯದ ಚಟಕ್ಕೆ, ಅಸುರಕ್ಷಿತ ನಡೆನುಡಿಗೆ ಒಳಗಾಗಿ ಎಚ್‌ಐವಿ ಬಲೆಗೆ ಬೀಳುತ್ತಿದ್ದಾರೆ ಎಂದು ವೈದ್ಯರೆ ಸ್ಪಷ್ಟಪಡಿಸುತ್ತಾರೆ. ಇದರಲ್ಲಿ 22 ವಯಸ್ಸಿನ ಒಳಗಿನವರೆ ಜಾಸ್ತಿಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಪ್ರತಿವರ್ಷ ಸೋಂಕಿತರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಾಗಿ ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ.

ಸವಾಲು

ಕಳೆದ 2 ವರ್ಷಗಳ ವರದಿಯ ಪ್ರಕಾರ ಶೇ.10ರಷ್ಟು ಎಚ್‌ಐವಿ ಸೋಂಕಿತರು ಸಲಿಂಗಕಾಮಿಗಳು ಇರುವುದು ಕೂಡ ದಾಖಲಾಗಿದೆ. ಈ ಅಂಕಿ-ಅಂಶಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿರುವುದು ಕೂಡ ಆರೋಗ್ಯ ಇಲಾಖೆಗೆ ಇನ್ನೊಂದು ಸವಾಲಾಗಿದೆ. ಇದರಲ್ಲಿ ಹೆಚ್ಚಾಗಿ ಸುಶಿಕ್ಷಿತರೆ ಹೆಚ್ಚಾಗಿ ಇರುವುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ.

ಎಚ್‌ಐವಿ ಪತ್ತೆಯಾದಾಗ ಸೋಂಕಿತರೊಡನೆ ಆಪ್ತ ಸಮಾಲೋಚನೆ ನಡೆಸಿದಾಗ ಹದಿಹರೆಯದ ಕುತೂಹಲ, ಮೊಬೈಲ್‌ ಗೀಳಿನಿಂದಲೆ ಸೋಂಕು ಹಬ್ಬಿಸಿಕೊಂಡಿರುವುದು ಪತ್ತೆಯಾಗಿದೆ. ಯುವ ಜನತೆಯಲ್ಲೆ ಹೆಚ್ಚಾಗಿ ಎಚ್‌ಐವಿ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ವಿದ್ಯಮಾನವನ್ನು ಗಂಭೀರವಾಗಿ ತೆಗೆದುಕೊಂಡು ಶಾಲೆ ಕಾಲೇಜುಗಳಿಗೆ ತೆರಳಿ ಜಾಗೃತಿ ಆಂದೋಲನ ಹಾಗೂ ವಿವಿಧ ಕಾರ್ಯಕ್ರಮ ಆಯೋಜಿಸಿ ಎಚ್‌ಐವಿ ನಿರ್ಮೂಲನೆಗೆ ಶ್ರಮಿಸಲಾಗುತ್ತಿದೆ ಎನ್ನುತ್ತಾರೆ ಅಂಕೋಲಾದ ಐಸಿಟಿಸಿ ಆಪ್ತ ಸಮಾಲೋಚಕಿ ರಾಜೇಶ್ವರಿ ಕಿಲೋಸ್ಕರ.