ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಆಮದು ಸುಂಕವನ್ನು ಅಕ್ರಮವೆಂದು ಘೋಷಿಸಿದೆ. ಈ ತೀರ್ಪಿನಿಂದಾಗಿ, ಅಮೆರಿಕವು ಸಂಗ್ರಹಿಸಿದ್ದ 15.55 ಲಕ್ಷ ಕೋಟಿ ರು. ತೆರಿಗೆಯನ್ನು ಮರುಪಾವತಿಸಬೇಕಾಗಿದ್ದು, ಇದರಲ್ಲಿ ಭಾರತದಿಂದ ಆಮದಾದ ವಸ್ತುಗಳ ಮೇಲಿನ 1.12 ಲಕ್ಷ ಕೋಟಿ ರು. ಸೇರಿದೆ. 

  • - 15.55 ಲಕ್ಷ ಕೋಟಿ ರು. ವಾಪಸ್‌ ನೀಡುವ ಅನಿವಾರ್ಯತೆ
  • - ಭಾರತದ ಸರಕಿಂದ 1.12 ಲಕ್ಷ ಕೋಟಿ ಸಂಗ್ರಹಿದ್ದ ಅಮೆರಿಕ

ವಾಷಿಂಗ್ಟನ್‌: ಅಮೆರಿಕದ ಸುಪ್ರೀಂ ಕೋರ್ಟ್‌, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇರಿದ್ದ ಯದ್ವಾತದ್ವಾ ಸುಂಕ ಅಕ್ರಮ’ ಎಂದು ಘೋಷಿಸಿರುವ ಕಾರಣ, ವಿದೇಶದಿಂದ ಆಮದಾಗುವ ವಸ್ತುಗಳ ಮೇಲೆ ಟ್ರಂಪ್‌ ಹೇರಿದ್ದ ಪ್ರತಿ ತೆರಿಗೆಯ ರೀಫಂಡ್‌ ಪ್ರಕ್ರಿಯೆಗೆ ಈಗ ಚಾಲನೆ ಸಿಕ್ಕಿದೆ.

ಟ್ರಂಪ್‌ ಸರ್ಕಾರ ವಿದೇಶಿ ವಸ್ತುಗಳ ಮೇಲೆ ಪ್ರತಿ ತೆರಿಗೆ ರೂಪದಲ್ಲಿ ಸಂಗ್ರಹಿಸಿದ್ದ 15.55 ಲಕ್ಷ ಕೋಟಿ ರುಗಳನ್ನು. ವಾಪಸ್‌ ನೀಡಬೇಕಿದೆ. ಈ ಪೈಕಿ ಭಾರತದಿಂದ ಆಮದಾಗಿದ್ದ ವಸ್ತುಗಳ ಮೇಲಿನ 1.12 ಲಕ್ಷ ಕೋಟಿ ರು.ನಷ್ಟು ತೆರಿಗೆ ಹಣವನ್ನು ಈ ರೀತಿ ಆಮದುದಾರರಿಗೆ ಮರುಪಾವತಿ ಮಾಡುವ ಅನಿವಾರ್ಯತೆ ಇದೆ.

‘ಟ್ರಂಪ್‌ ತೆರಿಗೆ ರೀಫಂಡ್‌ ಮೇಲೆ ಭಾರತೀಯ ರಫ್ತುದಾರರಿಗೆ ನೇರವಾಗಿ ಯಾವುದೇ ಹಕ್ಕಿಲ್ಲ. ಆದರೆ, ಅಮೆರಿಕದ ಆಮದುದಾರರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರೆ ಈ ರೀಫಂಡ್‌ನಲ್ಲಿ ಭಾರತೀಯ ರಫ್ತುದಾರರಿಗೂ ಪಾಲು ಸಿಗುವ ನಿರೀಕ್ಷೆ ಇದೆ’ ಎಂದು ಭಾರತದ ರಫ್ತುದಾರರ ಸಂಸ್ಥೆ ಎಫ್‌ಐಇಒ ತಿಳಿಸಿದೆ.

ಕಳೆದ ವರ್ಷ ಏ.2ರಂದು ಹಾಕಿದ್ದ ತೆರಿಗೆ:

2025, ಏಪ್ರಿಲ್‌ 2ರಂದು ಅಮೆರಿಕವು ವಿದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಲು ಆರಂಭಿಸಿತ್ತು. ಆದರೆ, ರಷ್ಯಾದಿಂದ ತೈಲ ಆಮದು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆ.7ರಂದು ಭಾರತ ವಸ್ತುಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಿತ್ತು. ವ್ಯಾಪಾರ ಮಾತುಕತೆ ಹಿನ್ನೆಲೆಯಲ್ಲಿ ಫೆ.6ರಂದು ಈ ತೆರಿಗೆಯನ್ನು ಶೇ.18ಕ್ಕೆ ಇಳಿಸಲಾಗಿತ್ತು.

ಫೆಬ್ರವರಿ ತಿಂಗಳಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್‌ ಈ ತೆರಿಗೆ ಪ್ರಕ್ರಿಯೆಯನ್ನೇ ಅಕ್ರಮ ಎಂದು ಹೇಳಿ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕವು ಅನಿವಾರ್ಯವಾಗಿ ಪ್ರತಿ ತೆರಿಗೆ ರೂಪದಲ್ಲಿ ಸಂಗ್ರಹಿಸಿದ್ದ ಹಣವನ್ನು ವಾಪಸ್‌ ನೀಡಬೇಕಿದೆ.

ಅದರ ಭಾಗವಾಗಿ ಅಮೆರಿಕದ ಕಸಮ್ಸ್‌ ಮತ್ತು ಗಡಿ ರಕ್ಷಣಾ ವಿಭಾಗವು ತೆರಿಗೆ ರೀಫಂಡ್‌ಗಾಗಿ ಹೊಸದಾಗಿ ಪ್ಲಾಟ್‌ಫಾರ್ಮ್‌ವೊಂದನ್ನು ಸಿದ್ಧಪಡಿಸಿದೆ. ಈ ಮೂಲಕ ಆಮದುದಾರರು, ಕಸ್ಟಮ್ಸ್‌ ಬ್ರೋಕರ್‌ಗಳಿಗೆ ಏ.20ರಿಂದಲೇ ಮರುಪಾವತಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಆಮದುದಾರರಿಗೆ ಅರ್ಜಿ ಸಲ್ಲಿಸಿದ 60ರಿಂದ 90 ದಿನಗಳೊಳಗೆ ತೆರಿಗೆ ಹಣವನ್ನು ಬಡ್ಡಿ ಸಮೇತ ವಾಪಸ್‌ ನೀಡಲು ನಿರ್ಧರಿಸಲಾಗಿದೆ.

ಮಾರ್ಚ್‌ ತಿಂಗಳಲ್ಲಿ ಕಸ್ಟಮ್ಸ್‌ ಏಜೆನ್ಸಿಯ ಅಂದಾಜಿನ ಪ್ರಕಾರ ಒಟ್ಟು 3.30 ಲಕ್ಷ ಆಮದುದಾರರು ಮರುಪಾವತಿಗೆ ಅರ್ಹರಾಗಿದ್ದಾರೆ.