ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಶಾಂತಿ ಮಾತುಕತೆ ಪುನರಾರಂಭದ ಬಗ್ಗೆ ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಅವರ 'ಡಬಲ್ ಗೇಮ್' ನಿಂದಾಗಿ ಇರಾನ್ ಸಂಧಾನಕ್ಕೆ ಹಿಂದೇಟು ಹಾಕಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್: ಇರಾನ್ ಜೊತೆಗಿನ 2ನೇ ಸುತ್ತಿನ ಶಾಂತಿ ಮಾತುಕತೆಗೆ ಸಂಬಂಧಿಸಿದ ‘ಒಳ್ಳೆಯ ಸುದ್ದಿ’ ಶುಕ್ರವಾರದೊಳಗೆ ಬರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ‘ಮುಂದಿನ 36 ರಿಂದ 72 ಗಂಟೆಗಳಲ್ಲಿ ಶಾಂತಿ ಮಾತುಕತೆ ಪುನರಾರಂಭವಾಗಬಹುದು’ ಎಂದೂ ಹೇಳಿದ್ದಾರೆ.

ಬುಧವಾರ ನ್ಯೂಯಾರ್ಕ್ ಪೋಸ್ಟ್ ಜತೆ ಮಾತನಾಡಿದ ಟ್ರಂಪ್‍, ‘ನನೆಗುದಿಗೆ ಬಿದ್ದಿರುವ ಮಾತುಕತೆಗಳಿಗೆ ಚಾಲನೆ ಸಿಗುವ ನಿರೀಕ್ಷೆ ಇದೆ. ಇದು ಸಾಧ್ಯವಿದೆ’ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ರಾತ್ರಿ ಹೇಳಿಕೆ ನೀಡಿದ್ದ ಟ್ರಂಪ್‌, ‘ಇರಾನ್‌ನಿಂದ ಏಕೀಕೃತ ಶಾಂತಿ ಪ್ರಸ್ತಾಪದ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮನವಿ ಮೇರೆಗೆ ಕದನ ವಿರಾಮ ವಿಸ್ತರಿಸಲು ನಿರ್ಧರಿದ್ದೇನೆ. ಆದರೆ ಹೋರ್ಮುಜ್‌ ಮೇಲಿನ ಅಮೆರಿಕದ ದಿಗ್ಬಂಧನ ಮುಂದುವರಿಯಲಿದೆ’ ಎಂದಿದ್ದರು.

ದಿಗ್ಬಂಧನ ಇದ್ರೂ ಹೋರ್ಮುಜ್‌ ದಾಟಿದ 34 ಹಡಗು: ವರದಿ

ಟೆಹ್ರಾನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ಹೋರ್ಮುಜ್‌ ಜಲಸಂಧಿ ಮೇಲೆ ಏ.13ರಿಂದ ದಿಗ್ಬಂಧನ ವಿಧಿಸಿದ್ದು, ಇರಾನ್‌ನ ಹಡಗುಗಳ ಸಂಚಾರ ನಿರ್ಬಂಧಿಸಿದ್ದಾರೆ. ಆದರೆ ಇದರ ನಡುವೆಯೂ ಇರಾನ್‌ಗೆ ಸಂಪರ್ಕ ಹೊಂದಿರುವ ಕನಿಷ್ಠ 34 ಟ್ಯಾಂಕರ್‌ಗಳು ಅಮೆರಿಕದ ದಿಗ್ಬಂಧನವನ್ನು ಮೀರಿ ಸಾಗಿವೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ ವರದಿ ಮಾಡಿದೆ.

ಏ.13 ರಂದು ಹೋರ್ಮುಜ್‌ ಮೂಲಕ ಇರಾನ್ ಒಳಗೆ ಮತ್ತು ಹೊರಗೆ ಹೋಗುವ ಹಡಗುಗಳ ಮೇಲೆ ದಿಗ್ಬಂಧನ ಹೇರಿದೆ. ಈ ಮೂಲಕ ಇರಾನ್‌ಗೆ ಆರ್ಥಿಕ ಹೊಡೆತ ನೀಡುವ ಇರಾದೆ ಹೊಂದಿದೆ.

ಮುನೀರ್ ಡಬಲ್‌ ಗೇಮ್‌ ಕಾರಣ ಸಂಧಾನಕ್ಕೆ ಬಾರದ ಇರಾನ್?

ಇಸ್ಲಾಮಾಬಾದ್: ಇರಾನ್-ಅಮೆರಿಕ ನಡುವಿನ 2ನೇ ಸುತ್ತಿನ ಸಂಧಾನ ಸಭೆ ನಡೆಯದೇ ಇರಲು ಪಾಕ್ ಸೇನಾ ಮುಖ್ಯಸ್ಥ ಫೀ। ಮಾ। ಅಸೀಂ ಮುನೀರ್ ಅವರ ಡಬಲ್‌ ಗೇಮ್‌ ಕಾರಣ. ಅವರು ಅತ್ತ ಇರಾನ್ ಜತೆ ಚೆನ್ನಾಗಿದ್ದುಕೊಂಡೂ ಅಮೆರಿಕ ಪರ ವಾಲಿದ್ದರು. ಇದು ಇರಾನ್‌ ಕೋಪಕ್ಕೆ ಕಾರಣವಾಗಿ, ಆ ದೇಶ ಸಂಧಾನಕ್ಕೆ ಬರಲಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಇರಾನ್‌ನ ಸರ್ಕಾರದ ಪ್ರಮುಖರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುನೀರ್‌, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ನಿಮ್ಮ ಬೇಡಿಕೆಗಳ ಬಗ್ಗೆ ಮಾತನಾಡುವೆ. ಇರಾನ್‌ಗೆ ಅನುಕೂಲಕರ ಆಗುವ ನಿರ್ಣಯಕ್ಕೆ ಯತ್ನಿಸುವೆ’ ಎಂದು ಭರವಸೆ ನೀಡಿದ್ದರು. ಆ ಪ್ರಕಾರ ಮುನೀರ್ ಅವರಿಗೆ ಇರಾನ್‌ ತನ್ನ ಬೇಡಿಕೆಗಳ ಪಟ್ಟಿ ನೀಡಿತ್ತು.

ಆದರೆ, ಈ ಬೇಡಿಕೆಯ ಪಟ್ಟಿಯನ್ನು ಮುನೀರ್‌ ಅಮೆರಿಕಕ್ಕೆ ರವಾನಿಸಲೇ ಇಲ್ಲ ಎಂದು ಗೊತ್ತಾಗಿದೆ. ಹೀಗಾಗಿಯೇ ಮುನೀರ್‌ ಮೇಲೆ ಇರಾನ್‌ಗೆ ನಂಬಿಕೆಯೇ ಹೊರಟು ಹೋಗಿದೆ ಎಂದು ಉನ್ನತ ಮೂಲಗಳು ಹೇಳಿವೆ ಎಂದು ಮಾಧ್ಯಮ ವರದಿ ಹೇಳಿದೆ.

ಯುದ್ಧದಲ್ಲಿ ಸೋತವರು ಷರತ್ತು ವಿಧಿಸಲು ಸಾಧ್ಯವಿಲ್ಲ: ಇರಾನ್

ಟೆಹ್ರಾನ್‌: ಅಮೆರಿಕದ ಕದನ ವಿರಾಮ ವಿಸ್ತರಣೆಗೆ ಇರಾನ್ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದೆ. ಯುದ್ಧದಲ್ಲಿ ಸೋತವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಇರಾನ್‌, ಕದನ ವಿರಾಮ ವಿಸ್ತರಣೆಯು ಅಚ್ಚರಿಯ ದಾಳಿಗೆ ಪೂರ್ವ ಸಿದ್ಧತೆ ನಡೆಸುವ ತಂತ್ರಗಾರಿಕೆಯ ಭಾಗ ಅಷ್ಟೆ ಎಂದು ತಿಳಿಸಿದೆ.

‘ಟ್ರಂಪ್‌ ಅವರ ಕದನ ವಿರಾಮ ವಿಸ್ತರಣೆ ಕ್ರಮವು ಬಾಂಬ್‌ ದಾಳಿಗಿಂತ ಭಿನ್ನವೇನಲ್ಲ. ಅಮೆರಿಕದ ಯಾವುದೇ ದುಸ್ಸಾಹಸಕ್ಕೆ ಸೇನೆ ಮೂಲಕ ಪ್ರತಿಕ್ರಿಯೆ ಸಲ್ಲಿಸಲಾಗುವುದು. ಇರಾನ್‌ ಈ ವಿಚಾರದಲ್ಲಿ ಮುಂದಾಳತ್ವ ತೆಗೆದುಕೊಳ್ಳುವ ಸಮಯ ಬಂದಿದೆ’ ಎಂದು ಇರಾನ್‌ ಸಂಸತ್ತಿನ ಸ್ಪೀಕರ್‌ ಮೊಹಮ್ಮದ್‌ ಬಘಾರ್‌ ಘಲಿಬಾಫ್‌ ಅವರ ಹಿರಿಯ ಸಲಹೆಗಾರ ಮಹ್ದಿ ಮೊಹಮ್ಮದಿ ತಿಳಿಸಿದ್ದಾರೆ.