ಆತನಿಂದ 14 ತಿಂಗಳ ನರಕ ಯಾತನೆ: ಸುದೀಪ್, ಶಿವಣ್ಣ ನಾಯಕಿಯ ಬದುಕಿನ ಕರಾಳ ಸ್ಟೋರಿ
ಕನ್ನಡಕ್ಕೂ ಚಿರಪರಿಚಿತರಾದ ಖ್ಯಾತ ನಟಿ ಫ್ಲೋರಾ ಸೈನಿ, ತಮ್ಮ ನಿರ್ಮಾಪಕ ಬಾಯ್ಫ್ರೆಂಡ್ನಿಂದ ಅನುಭವಿಸಿದ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 14 ತಿಂಗಳ ಕಾಲ ಚಿತ್ರಹಿಂಸೆ ಅನುಭವಿಸಿ, ತಪ್ಪಿಸಿಕೊಂಡು ಬದುಕನ್ನು ಮತ್ತೆ ಕಟ್ಟಿಕೊಂಡ ಕಥೆ ವಿವರಿಸಿದ್ದಾರೆ

ಹಲವು ಚಿತ್ರಗಳಲ್ಲಿ ನಟನೆ
ಕಾಲಿವುಡ್, ಟಾಲಿವುಡ್ನ ಸೂಪರ್ಸ್ಟಾರ್ಗಳ ಜೊತೆ ಅಭಿನಯಿಸಿ ಖ್ಯಾತಿ ಗಳಿಸಿರುವ ಫ್ಲೋರಾ ಸೈನಿ (Flora Saini) ಅಲಿಯಾಸ್ ಆಶಾ ಸೈನಿ. ಕನ್ನಡಿಗರಿಗೂ ಚಿರಪರಿಚಿತರು. ಸುದೀಪ್ ನಟನೆಯ 'ನಮ್ಮಣ್ಣ' , ಶಿವರಾಜ್ ಕುಮಾರ್ ನಟನೆಯ 'ಕೋದಂಡರಾಮ'ದಲ್ಲಿ ಅವರು ನಟಿಸಿದ್ದಾರೆ. ಇದಷ್ಟೇ ಅಲ್ಲದೇ, 'ಸ್ತ್ರೀ', 'ಪ್ರೇಮ ಕೋಸಂ', 'ನರಸಿಂಹ ನಾಯ್ಡು'ನಂಥ ತಮಿಳು, ತೆಲಗು ಹಲವು ಬ್ಲಾಕ್ಬಸ್ಟರ್ ಸಿನಿಮಾಗಳನ್ನೂ ನೀಡಿದ್ದಾರೆ.
ಕರಾಳ ಘಟನೆ
ಇಂಥ ನಟಿಯ ಜೀವನದಲ್ಲಿ ನಡೆದ ಭಯಾನಕ ಘಟನೆಯೀಗ ವೈರಲ್ ಆಗುತ್ತಿದೆ. ಇವರು ಖ್ಯಾತ ನಿರ್ಮಾಪಕರಿಂದ ಅನುಭವಿಸಿದ್ದ ಕರಾಳ ಘಟನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಅದು ಮತ್ತೊಮ್ಮೆ ವೈರಲ್ ಆಗುತ್ತಿದೆ. ತಮ್ಮ ಬಾಯ್ಫ್ರೆಂಡ್ ಕೂಡ ಆಗಿರುವ ನಿರ್ಮಾಪಕ ಗೌರಂಗ್ ದೋಷಿಯಿಂದ ಅನುಭವಿಸಿರುವ ಘಟನೆ ವಿವರಿಸಿದ್ದಾರೆ.
ಆತನ ಕ್ರೂರತನ
ಅಷ್ಟಕ್ಕೂ ನಟಿ ಹೇಳಿದ್ದೇನೆಂದರೆ, ಆತನ ಪ್ರೀತಿಗೆ ಬಿದ್ದ ಕೆಲವೇ ದಿನಗಳಲ್ಲಿ ಆತ ಕ್ರೂರಿಯೆಂಬುದರ ಅರಿವಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು. ಆತ ನನ್ನ ಖಾಸಗಿ ಅಂಗಗಳಿಗೆ ಒದೆಯುತ್ತಿದ್ದ, ಮುಖವನ್ನು ಬಾಕ್ಸಿಂಗ್ ಬ್ಯಾಗ್ನಂತೆ ಬಳಸುತ್ತಿದ್ದ. ಯಾರಿಗೂ ಫೋನ್ ಮಾಡದಂತೆ ತಡೆಯುತ್ತಿದ್ದ. ಸಿನಿಮಾಗಳಲ್ಲಿ ನಟಿಸದಂತೆ ತಾಕೀತು ಮಾಡುತ್ತಿದ್ದ. ಇದನ್ನು ಯಾರೊಂದಿಗೂ ಹೇಳಿಕೊಳ್ಳಲು ಆಗಲೇ ಇಲ್ಲ. ಅವನಿಗಾಗಿ ಎಲ್ಲರನ್ನು ಬಿಟ್ಟು ಹೋದರೆ ಹೀಗೆಲ್ಲಾ ದೌರ್ಜನ್ಯ ಮಾಡಿದ. ಯಾಕೆ ಆತ ಹೀಗೆ ಹೊಡೆಯುತ್ತಿದ್ದಾನೆ ಎಂದು ಗೊತ್ತಾಗಲಿಲ್ಲ. ಆದರೂ ಆತ ಒಳ್ಳೆಯವನು ಎಂದು ನಂಬಿದ್ದೆ. ಕೊನೆಗೂ ಅವನ ಸಮಸ್ಯೆ ಅರ್ಥವಾಗಲಿಲ್ಲ. ಎಲ್ಲಾದರೂ ಹೋಗಿಬಿಡುತ್ತೇನೆ ಎಂದೆ. ಹಾಗೆ ಮಾಡಿದರೆ ನನ್ನನ್ನು, ನನ್ನ ಪೋಷಕರನ್ನು ಕೊಂದುಬಿಡುತ್ತೇನೆ ಎಂದು ಬೆದರಿಸಿದ್ದ. ಹದಿನಾಲ್ಕು ತಿಂಗಳು ಕತ್ತಲೆಯಲ್ಲಿಯೇ ಬದುಕಿದೆ. ಯಾರನ್ನೂ ಭೇಟಿಯಾಗಲು, ಮಾತನಾಡಲು ಆಗಲೇ ಇಲ್ಲ. ಒಂದು ದಿನ ಚಿತ್ರಹಿಂಸೆ ಹೆಚ್ಚಾಯಿತು. ಆತ ನನ್ನ ಹೊಟ್ಟೆಗೆ ಒದ್ದ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಮನೆ ಬಿಟ್ಟು ಓಡಿಹೋದೆ' ಎಂದು ಫ್ಲೋರಾ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಹೊಡೆತ ತಿಂದ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
ಹಲವು ಚಿತ್ರಗಳಲ್ಲಿ ನಟನೆ
ನಂತರ ಓಡಿ ಬಂದ ಫ್ಲೋರಾ ಪಾಲಕರ ಜತೆ ವಾಸಮಾಡುತ್ತಿದ್ದಾರೆ. ಹಲವು ತಿಂಗಳು ಚೇತರಿಸಿಕೊಂಡ ಬಳಿಕ ನಟನೆ ಆರಂಭಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ನ 'ಬೇಡಿಯಾ' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. 'ನಾನು ಈಗ ಖುಷಿಯಾಗಿದ್ದೇನೆ. ನನಗೆ ಪ್ರೀತಿಯೂ ಸಿಕ್ಕಿದೆ' ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಹೇಳಿಕೊಂಡಿರುವ ಅವರು, 'ಇನ್ನೆಂದೂ ಆತನ ಬಳಿಗೆ ಹೋಗಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೂ ಅವರು ನನ್ನ ಮಾತು ನಂಬಲಿಲ್ಲ. ಕೊನೆಗೆ ಲಿಖಿತ ರೂಪದಲ್ಲಿ ದೂರು ದಾಖಲಿಸಿದೆ. ಎಷ್ಟೇ ಕತ್ತಲು ನಿಮ್ಮನ್ನು ಆವರಿಸಿದರೂ, ಕೊನೆಯಲ್ಲಿ ಬೆಳಕು ಸಿಕ್ಕೇ ಸಿಗುತ್ತದೆ' ಎಂದಿದ್ದಾರೆ ನಟಿ ಫ್ಲೋರಾ ಸೈನಿ.
ಯಾರಿ ನಟಿ?
ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, ಚಂಢೀಗಢ ಮೂಲದವರು. 1999ರಲ್ಲಿ 'ಪ್ರೇಮಕೋಸಂ' ತೆಲುಗು ಚಿತ್ರದ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟವರು. ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆ ಬಳಿಕ ಹಿಂದಿ, ಕನ್ನಡ, ಪಂಜಾಬಿ ಚಿತ್ರಗಳಲ್ಲಿ ಅವರು ನಟಿಸಿದರು. ಗೌರಂಗ್ ದೋಶಿ (Gaurang Doshi) ಅವರಿಂದ ಬದುಕು ನರಕವಾಗಿತ್ತು ಎಂದು ಈ ಮೊದಲು ಅವರ ಆರೋಪ ಮಾಡಿದ್ದರು.
ಕಹಿ ಘಟನೆ
ಈಗ ಹೆಸರನ್ನು ಉಲ್ಲೇಖ ಮಾಡದೆ ಅವರು ತಾವು ಅನುಭವಿಸಿರುವ ಕಹಿ ಘಟನೆ ಕುರಿತು ಹೇಳಿಕೊಂಡಿದ್ದಾರೆ. 'ನಾನು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಯಶಸ್ಸನ್ನು ಕಂಡವಳು. 20 ರ ಹರೆಯದಲ್ಲಿಯೇ ಸಿನಿ ರಂಗಕ್ಕೆ ಪ್ರವೇಶಿಸಿದೆ. 20 ಕ್ಕೂ ಹೆಚ್ಚು ಟಾಪ್ ಡಿಸೈನರ್ಗಳಿಗಾಗಿ ಮಾಡೆಲಿಂಗ್ (Modelling) ಮಾಡಿದ್ದೆ. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಆ ನಂತರ ನಿರ್ಮಾಪಕನೊಬ್ಬನ ಬಲೆಗೆ ಬಿದ್ದೆ. ಅಲ್ಲಿಂದ ನನ್ನ ಬದುಕೇ ನರಕವಾಗೋಯ್ತು' ಎಂದು ಫ್ಲೋರಾ ಬರೆದುಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

