Hassan Accident: ಹುಟ್ಟುಹಬ್ಬದ ದಿನದಂದೇ ಮಿಥುನ್ ಮತ್ತು ಆತನ ಗೆಳೆಯ ಸುರೇಶ್ ಗಣೇಶ ವಿಸರ್ಜನೆ ವೇಳೆ ಟ್ಯಾಂಕರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತ ಮಿಥುನ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದನು.
ಹಾಸನ/ಚಿತ್ರದುರ್ಗ: ಹುಟ್ಟುಹಬ್ಬದ ದಿನವಾಗಿದೆ. ರಾತ್ರಿಯೇ ಗೆಳೆಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಮಿಥುನ್, ಗಣೇಶ ವಿಸರ್ಜನೆಯಲ್ಲಿ ಭಾಗಿಯಾಗಿದ್ದನು. ಇಂಜಿನಿಯರಿಂಗ್ ಓದುತ್ತಿದ್ದ ಮಿಥುನ್ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ನಿವಾಸಿ. ಸದ್ಯ ಮಿಥುನ್ ಮೃತದೇಹ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿರಿಸಲಾಗಿದೆ. ಮಗನ ಸಾವಿನ ಸುದ್ದಿ ತಿಳಿದು ಪೋಷಕರು ಹಾಸನಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಇದೇ ಘಟನೆಯಲ್ಲಿ ಮಿಥುನ್ ಗೆಳೆಯ ಸುರೇಶ್ ಸಹ ಸಾವನ್ನಪ್ಪಿದ್ದಾನೆ.
ಹಾಸ್ಟೆಲ್ ನಲ್ಲೇ ಅತ್ಯುತ್ತಮವಾದಂತಹ ಹುಡುಗರು
ಹಾಸ್ಟೆಲ್ ನಲ್ಲೇ ಅತ್ಯುತ್ತಮವಾದಂತಹ ಹುಡುಗರು ಸುರೇಶ್ ಮತ್ತು ಮಿಥುನ್. ತಮ್ಮನ ರೀತಿಯಲ್ಲಿ ಇಬ್ಬರೂ ಕೂಡ ನಮ್ಮ ಜೊತೆಯಲ್ಲಿದ್ದರು. ನಿನ್ನೆ ಹಾಸ್ಟೆಲ್ ನಿಂದ ಯಾರು ಹೋದರು , ಯಾರು ಬಂದ್ರು ಅನ್ನೋದು ಗೊತ್ತಾಗ್ಲಿಲ್ಲ. ನಿನ್ನೆ ಮಿಥುನ್ ಮತ್ತು ಸುರೇಶ್ ಕಾಲೇಜಿನಿಂದ ನೇರವಾಗಿ ಹೋಗಿದ್ದಾರೆ. ಇನ್ನು ನಾಲ್ಕು ತಿಂಗಳು ಕಳೆದಿದ್ದರೆ ಕೋರ್ಸ್ ಮುಗಿದು ಜೀವನ ರೂಪಿಸಿಕೊಳ್ಳುತ್ತಿದ್ದರು ಎಂದು ಅಡುಗೆ ಸಿಬ್ಬಂದಿ ಭಾವುಕರಾಗಿದ್ದಾರೆ. ಸುರೇಶ್ ಮತ್ತು ಮಿಥುನ್ ಹಾಸನ ಜಿಲ್ಲೆಯ ಹೊಳೆನರಸೀಪುರ ಸಮೀಪ ಇರುವ ಮೊಸಳೆ ಹೊಸಹಳ್ಳಿಯ ದೇವರಾಜ ಅರಸು ಮೆಟ್ರಿಕಗ ನಂತರ ಬಾಲಕ ವಸತಿ ನಿಲಯದಲ್ಲಿದ್ದರು.
ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ
ಕರ್ನಾಟಕದ ಹಾಸನದಲ್ಲಿ ನಡೆದ ಅಪಘಾತವು ಹೃದಯ ವಿದ್ರಾವಕವಾಗಿದೆ. ಈ ದುರಂತದಲ್ಲಿ ಮೃತರ ಕುಟುಂಬದ ಜೊತೆಯಲ್ಲಿ ನಾವಿದ್ದೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಕ್ಕೆ PMNRF ನಿಂದ 2 ಲಕ್ಷ ರೂ ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡಲಾಗುವುದು ಎಂದು ಪ್ರಧಾನಿಗಳು ಘೋಷಿಸಿದ್ದಾರೆ.

ಸಿ.ಟಿ.ರವಿ ಸಾಂತ್ವಾನ
ಮೊಸಳೆ ಹೊಸಳ್ಳಿ ಗಣಪತಿ ವಿಸರ್ಜನೆ ವೇಳೆ ನಡೆದ ಘಟನೆಯಲ್ಲಿ ಮೃತಪಟ್ಟ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾನೆನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.
ಸಿಎನ್ ಅಶ್ವಥ್ ನಾರಾಯಣ್ ಸಂತಾಪ
ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಏಕಾಏಕಿ ಟ್ಯಾಂಕರ್ ವಾಹನ ಅಪ್ಪಳಿಸಿದ ಅಪಘಾತದಲ್ಲಿ ಹಲವಾರು ಜನ ದುರ್ಮರಣಕ್ಕೀಡಾಗಿ 20 ಕ್ಕೂ ಅಧಿಕ ಜನರು ಗಾಯಗೊಂಡಿರುವ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ದುಖತಪ್ತ ಕುಟುಂಬವರ್ಗದವರಿಗೆ ಭಗವಂತನು ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವ ಸಿ.ಎನ್.ಅಶ್ವಥ್ ನಾರಾಯಾಣ್ ಸಂತಾಪವನ್ನು ಸೂಚಿಸಿದ್ದಾರೆ.
ಇದನ್ನೂ ಓದಿ: ಭಿಕ್ಷೆ ಬೇಡಿ ಆಸ್ಪತ್ರೆ ಬಿಲ್ ಕಟ್ಟಿದ್ರೂ ಚಿಕಿತ್ಸೆ ಫಲಿಸದೆ ಮಗು ಸಾವು!
ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸಂತಾಪ
ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಭೀಕರ ಅಪಘಾತದಿಂದ 8 ಜನ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಹೃದಯವಿದ್ರಾವಕ ಘಟನೆ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ಗಾಯಗೊಂಡಿರುವವರೆಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಈ ದುರ್ಘಟನೆಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರ ದುಃಖದಲ್ಲಿ ನಾನೂ ಭಾಗಿಯಾಗಿರುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡಕ ಕಂಬನಿ ಮಿಡಿದಿದ್ದಾರೆ.


