ಬೆಂಗಳೂರಿನಲ್ಲಿ, ವೃದ್ಧೆಯೊಬ್ಬರ ಆರೈಕೆಗೆ ನೇಮಕಗೊಂಡಿದ್ದ ಕೇರ್ ಟೇಕರ್ ಸುಮಾರು 31 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾಳೆ. ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಬಾಣಸವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು (ಡಿ.11): ವೃದ್ಧರ ಸೇವೆಗೆಂದು ನೇಮಕಗೊಂಡಿದ್ದ ಕೇರ್ ಟೇಕರ್ ಒಬ್ಬಳು, ತಮ್ಮ ಮನೆಯಲ್ಲಿ ಕೆಲಸ ಮಾಡುವುದನ್ನೇ ಬಂಡವಾಳ ಮಾಡಿಕೊಂಡು ಸುಮಾರು 31 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ.

ಈ ಕಳ್ಳತನದ ಆರೋಪಿ ಚಾಂದಿನಿ (ಹೆಸರು ಬದಲಾಯಿಸಲಾಗಿದೆ), ಬಿಹಾರ ಮೂಲದವಳಾಗಿದ್ದು, ಕಳೆದ ಎರಡು ವರ್ಷಗಳಿಂದ ಈ ಅಪಾರ್ಟ್‌ಮೆಂಟ್‌ನಲ್ಲಿ ವೃದ್ಧೆಯೊಬ್ಬರ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದಳು. ವೃದ್ಧೆಯ ಮಕ್ಕಳು ವಿದೇಶದಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದ ಕಾರಣ, ಏಜೆನ್ಸಿಯ ಮೂಲಕ ಈ ಚಾಂದಿನಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ವೃದ್ಧೆಯ ಆರೈಕೆಯನ್ನು ನಂಬಿಕೆಯಿಂದ ನಿರ್ವಹಿಸುತ್ತಿದ್ದ ಚಾಂದಿನಿ, ತನ್ನ ಕೃತ್ಯದಿಂದ ಎಲ್ಲರ ನಂಬಿಕೆಗೂ ದಕ್ಕೆ ತಂದಿದ್ದಾಳೆ.

ಸಂಬಂಧಿಕರೇ ಟಾರ್ಗೆಟ್!

ವೃದ್ಧೆಯನ್ನು ನೋಡಿಕೊಳ್ಳಲು ಅವರ ಮಕ್ಕಳು ಆಗಾಗ್ಗೆ ಸಂಬಂಧಿಕರನ್ನು ಮನೆಗೆ ಕಳುಹಿಸುತ್ತಿದ್ದರು. ಈ ಸಂಬಂಧಿಕರು ವೃದ್ಧೆಯನ್ನು ನೋಡಲು ಬಂದಾಗ ತಮ್ಮ ಬೆಲೆಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿ ಇಟ್ಟು ಹೋಗುತ್ತಿದ್ದರು. ಕೇರ್ ಟೇಕರ್ ಚಾಂದಿನಿ ಇದನ್ನೇ ಅರಿತು, ಸಂಬಂಧಿಕರು ಇಲ್ಲದ ಸಮಯದಲ್ಲಿ ಅವರ ಬ್ಯಾಗ್‌ಗಳು ಮತ್ತು ವಾರ್ಡ್‌ರೋಬ್‌ಗಳಲ್ಲಿದ್ದ ಒಟ್ಟು 31 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಹಂತಹಂತವಾಗಿ ಕಳವು ಮಾಡಿದ್ದಾಳೆ. ಆಭರಣಗಳು ಕಣ್ಮರೆಯಾಗುತ್ತಿದ್ದರೂ, ಆರಂಭದಲ್ಲಿ ಮನೆಯವರಿಗೆ ಅನುಮಾನ ಬಂದಿರಲಿಲ್ಲ. ಆದರೆ, ಪದೇ ಪದೇ ಚಿನ್ನಾಭರಣಗಳು ಕಾಣೆಯಾದಾಗ, ಮನೆಯ ಸದಸ್ಯರಿಗೆ ಅನುಮಾನ ಬಂದಿದ್ದು, ಕಡೆಗೆ ಕೇರ್ ಟೇಕರ್ ಚಾಂದಿನಿ ಮೇಲೆ ಸಂಶಯ ವ್ಯಕ್ತವಾಗಿದೆ. ಕಳ್ಳತನದ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬಾಣಸವಾಡಿ ಪೊಲೀಸರಿಂದ ಆರೋಪಿ ಬಂಧನ

ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಬಾಣಸವಾಡಿ ಪೊಲೀಸರು, ಕೇರ್ ಟೇಕರ್ ಚಾಂದಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆಕೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಬಂಧಿತ ಆರೋಪಿ ಚಾಂದಿನಿಯಿಂದ ಕಳ್ಳತನವಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶದಲ್ಲಿರುವ ಮಕ್ಕಳ ಒತ್ತಾಯದ ಮೇರೆಗೆ ವೃದ್ಧರನ್ನು ನೋಡಿಕೊಳ್ಳಲು ಕೇರ್ ಟೇಕರ್‌ಗಳನ್ನು ನೇಮಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಇಂತಹ ಘಟನೆಗಳು ವಿಶ್ವಾಸಕ್ಕೆ ದ್ರೋಹ ಬಗೆಯುವುದರ ಜೊತೆಗೆ, ಜನರಲ್ಲಿ ಆತಂಕವನ್ನು ಮೂಡಿಸುತ್ತವೆ. ಕೇರ್ ಟೇಕರ್‌ಗಳನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆ ಪರಿಶೀಲನೆ (Background Check) ಮಾಡಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ.