ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯ ಬಗ್ಗೆ ರಾಜ್ಯ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮಾಜಿ ಹೈಕೋರ್ಟ್ ನ್ಯಾಯಾಧೀಶ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಲಾಗುವುದು. ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಬೆಂಗಳೂರು (ಜೂ.5): ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಸಭೆಯ ಬಳಿಕ ಕಾನೂನು ಸಚಿವ ಎಚ್‌ಕೆ ಪಾಟೀಲ್‌ ಇದರ ಮಾಹಿತಿ ನೀಡಿದ್ದರು. ಅದಾದ ಬಳಿಕ ಸಿಎಂ ಸಿದ್ಧರಾಮಯ್ಯ ದಿಢೀರ್‌ ಸುದ್ದಿಗೋಷ್ಠಿ ನಡೆಸಿ ಕೆಲವು ವಿವರಗಳನ್ನು ಬಹಿರಂಗ ಮಾಡಿದರು.

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, 'ಬುಧವಾರ ನಡೆದ ಅಹಿತಕರ ಘಟನೆಯ ಬಗ್ಗೆ ಬಹಳ ಗಂಭೀರವಾಗಿ ಚರ್ಚೆ ಮಾಡಿದ್ದೇವೆ. ಅದಾದ ಬಳಿಕ ಕೆಲವು ಪ್ರಮುಖ ನಿರ್ಧಾರಗಳನ್ನು ಮಾಡಿದ್ದೇವೆ. ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಮೈಕೆಲ್‌ ಕುನ್ಹಾ ನೇತೃತ್ವದಲ್ಲಿ ಕಾಲ್ತುಳಿತದ ಘಟನೆಯನ್ನು ತನಿಖೆ ಮಾಡಲಿದ್ದೇವೆ. ಅವರ ನೇತೃತ್ವದಲ್ಲಿ ಏಕ ಸದಸ್ಯ ಸಮಿತಿಯನ್ನು ರಚನೆ ಮಾಡಲಿದ್ದೇವೆ' ಎಂದು ತಿಳಿಸಿದ್ದಾರೆ.

ಆರ್‌ಸಿಬಿ, ಇವೆಂಟ್‌ ಮ್ಯಾನೇಜರ್‌ ಆದ ಡಿಎನ್‌ಎ, ಹಾಗೂ ಕೆಎಸ್‌ಸಿಎ ವಿರುದ್ಧ ಕಠಿಣ ಕ್ರಮ. ಈ ಸಂಸ್ಥೆಯ ಅಧಿಕಾರಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದೇವೆ. ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ನ ಅಡಿಯಲ್ಲಿ ಬರುವ ಎಲ್ಲಾ ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸುವ ತೀರ್ಮಾನ ಮಾಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್‌, ಅಡಿಷನಲ್ ಕಮಿಷನರ್(ಪಶ್ಚಿಮ ವಿಭಾಗ) ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್, ಕಬ್ಬನ್ ಪಾರ್ಕ್ ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಗಿರೀಶ್ ಹಾಗೂ ಕಬ್ಬನ್‌ ಪಾರ್ಕ್‌ ಠಾಣಾ ಸಿಬ್ಬಂದಿಯನ್ನೂ ಸಸ್ಪೆಂಡ್‌ ಮಾಡಲಾಗಿದೆ.

ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ನಂತರ ಡಿಸಿಎಂ, ಹೋಮ್ ಮಿನಿಸ್ಟರ್,ಹೆಚ್ ಕೆ ಪಾಟೀಲ್,ಮಹದೇವಪ್ಪ,ಸುಧಾಕರ್,ಅಡ್ವೈಸರ್ ಪೊನ್ನಣ್ಣ ಚರ್ಚೆ ಮಾಡಿ ಈ ನಿರ್ಧಾರ ಮಾಡಿದ್ದೇವೆ. ಇಂಟಲಿಜೆನ್ಸ್ ಫೈಲ್ಯೂರ್ ಆಗಿದೆ ಅದರ ಬಗ್ಗೆನೂ ಚರ್ಚೆ ಮಾಡಿದ್ದೇವೆ. ಮೆಲ್ನೋಟಕ್ಕೆ ಇರೋ ದೋಷಗಳ ಕಾರಣಕ್ಕೆ ಇವರನ್ನ ಸಸ್ಪೆಂಡ್‌ ಮಾಡಿದ್ದೇವೆ. ಮೂರು ಸಂಸ್ಥೆಗಳ ಬೇಜವ್ಧಾರಿತನ ಮೇಲ್ನೋಟಕ್ಕೆ ಕಂಡುಬರುತ್ತಿದೆ. ನಾನು ಎಂಎಲ್‌ಎ ಆದಮೇಲೆ ಯಾವಾಗಲೂ ಈ ರೀತಿ ನಡೆದಿರಲಿಲ್ಲ. ನಮ್ಮೆಲ್ಲರಿಗೂ ಈ ಘಟನೆ ನಡೆದಿರುವುದು ಘಾಸಿಗೊಳಿಸಿದೆ ಎಂದು ಸಿಎಂ ಹೇಳಿದ್ದಾರೆ.

ಇಡೀ ಪ್ರಕರಣ ಸಿಐಡಿಯಿಂದ ತನಿಖೆ

ಈಗಾಗಲೇ ಪ್ರಕರಣದಲ್ಲಿ ಆರ್‌ಸಿಬಿ, ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಡಿಎನ್‌ಎ ಹಾಗೂ ಕೆಎಸ್‌ಸಿಎ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಅಧಿಕಾರಿಗಳನ್ನು ಬಂಧಿಸುವಂತೆ ಸೂಚನೆ ನೀಡಲಾಗಿದೆ. ಇಡೀ ಪ್ರಕರಣದ ತನಿಖೆಯನ್ನು ಸಿಐಡಿ ಮಾಡಲಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಮಾಜಿಸ್ಟ್ರೇಟ್ ತನಿಖೆ ಪ್ರಾರಂಭ ಆಗಿದೆ ಯಾವುದೇ ಪ್ರಾಥಮಿಕ ವರದಿ ಬಂದಿಲ್ಲ. ಕ್ಯಾಬಿನೆಟ್‌ನಲ್ಲಿ ಚರ್ಚೆ ಆದ ಬಳಿಕ ಮಹಾನ್ ದುರಂತ ಎಂದು ಗೊತ್ತಾಗಿದೆ. ಸೀನಿಯರ್ ಅಧಿಕಾರಿಗಳು, ಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇವೆ.ಆ ಬಳಿಕ ಇಡೀ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.