ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಿದ್ದರೂ, ಉಳಿದೆಲ್ಲಾ ವಿಷಯಗಳಿಗಿಂತ ಪ್ರಥಮ ಭಾಷೆ ಕನ್ನಡದಲ್ಲೇ 19 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದು ಕನ್ನಡ ಭಾಷಾ ಬೋಧನೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಲಿಂಗರಾಜು ಕೋರಾ

ಬೆಂಗಳೂರು (ಏ.25): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಐತಿಹಾಸಿಕ ದಾಖಲೆ ಫಲಿತಾಂಶದ ಖುಷಿಯ ವಿಚಾರದ ನಡುವೆ ಉಳಿದೆಲ್ಲಾ ವಿಷಯಗಳಿಗಿಂತ ಪ್ರಥಮ ಭಾಷಾ ವಿಷಯಗಳಲ್ಲೇ ಅತಿ ಹೆಚ್ಚು, ಅದರಲ್ಲೂ ಕನ್ನಡದಲ್ಲಿ 19 ಸಾವಿರಕ್ಕೂ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಈ ಪೈಕಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಫೇಲಾದವರ ಸಂಖ್ಯೆ 18,678 ಇದ್ದರೆ, ಕನ್ನಡವನ್ನು ತೃತೀಯ ಭಾಷೆಯಾಗಿ ತೆಗೆದುಕೊಂಡು ಫೇಲಾದವರ ಸಂಖ್ಯೆ 289. ಇನ್ನು ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡಿದ್ದವರ ಪೈಕಿ ಕೂಡ ನೂರಾರು ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಹಾಗಾಗಿ ಕನ್ನಡದಲ್ಲಿ ಒಟ್ಟಾರೆ ಫೇಲಾದವರ ಸಂಖ್ಯೆ 19 ಸಾವಿರ ದಾಟಲಿದೆ ಎಂದು ತಿಳಿದು ಬಂದಿದೆ.

ಇದು, ಕರ್ನಾಟಕದ ಶಾಲೆಗಳಲ್ಲಿ ಇತರೆ ವಿಷಯಗಳಿಗಿಂತ ಕನ್ನಡ ಭಾಷಾ ಬೋಧನೆಗೆ ಕಡಿಮೆ ಪ್ರಾಧಾನ್ಯತೆ ನೀಡಲಾಗುತ್ತಿದೆಯಾ ಎನ್ನುವ ಆತಂಕ, ಅನುಮಾನ ಹುಟ್ಟುಹಾಕಿದೆ. ಅಲ್ಲದೆ, ಕನ್ನಡ ಭಾಷೆ ಬೋಧಿಸುವ ಶಿಕ್ಷಕ ವರ್ಗ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯವೂ ಇದಾಗಿದೆ.

7,48,660 ಮಂದಿ ಉತ್ತೀರ್ಣ:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಗುರುವಾರ ಪ್ರಕಟಿಸಿದ ವಿಷಯವಾರು ಫಲಿತಾಂಶದ ಅಂಕಿ-ಅಂಶಗಳನ್ನು ಅವಲೋಕಿಸಿದಾಗ, ಕಳೆದ ಬಾರಿ ಟಾಪ್‌ 3ನೇ ಸ್ಥಾನದಲ್ಲಿದ್ದ ಪ್ರಥಮ ಭಾಷಾ ಫಲಿತಾಂಶ ಈ ಬಾರಿ ಉಳಿದೆಲ್ಲಾ ವಿಷಯಗಳ ಫಲಿತಾಂಶಕ್ಕಿಂತ ಕಡಿಮೆ ಇದೆ. ಪ್ರಥಮ ಭಾಷಾ ವಿಷಯಗಳಲ್ಲಿ ಒಟ್ಟಾರೆ 7,69,926 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 7,48,660 ವಿದ್ಯಾರ್ಥಿಗಳು(ಶೇ.97.24) ಉತ್ತೀರ್ಣರಾಗಿದ್ದಾರೆ. ಉಳಿದ 21,266 ವಿದ್ಯಾರ್ಥಿಗಳು(ಶೇ.2.76) ಫೇಲಾಗಿದ್ದಾರೆ.

ಉಳಿದಂತೆ ದ್ವಿತೀಯ ಭಾಷೆಯಲ್ಲಿ ಶೇ.98.13ರಷ್ಟು, ತೃತೀಯ ಭಾಷೆಯಲ್ಲಿ ಶೇ.98.55, ಗಣಿತದಲ್ಲಿ ಶೇ.97.98, ವಿಜ್ಞಾನದಲ್ಲಿ ಶೇ.97.80, ಸಮಾಜ ವಿಜ್ಞಾನ ವಿಷಯದಲ್ಲಿ ಶೇ.97.85ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪ್ರಥಮ ಭಾಷೆಯಲ್ಲೇ ಕನ್ನಡದ ರಿಸಲ್ಟ್‌ ಕನಿಷ್ಠ

ಪ್ರಥಮ ಭಾಷಾ ವಿಷಯದ ಫಲಿತಾಂಶವೇ ಕಡಿಮೆ ಬಂದಿರುವಾಗ ಅದರಲ್ಲೂ ಕನ್ನಡವನ್ನು ಪ್ರಥಮ ಭಾಷೆಯಾಗಿ ಅಧ್ಯಯನ ಮಾಡಿ ಫೇಲಾದವರೇ ಹೆಚ್ಚು. ಕನ್ನಡ ಭಾಷಾ ವಿಷಯದಲ್ಲಿ ಪರೀಕ್ಷೆ ಬರೆದಿದ್ದ 6,07,275 ವಿದ್ಯಾರ್ಥಿಗಳಲ್ಲಿ 5,88,597 ಮಂದಿ(ಶೇ.96.92) ಪಾಸಾಗಿದ್ದು, ಉಳಿದ 18,678 ಮಂದಿ ಅನುತ್ತೀರ್ಣಗೊಂಡಿದ್ದಾರೆ.

ಇನ್ನು ಪ್ರಥಮ ಭಾಷೆಯಾಗಿ ಇನ್ನಿತರೆ ಭಾಷೆಗಳನ್ನು ಅಧ್ಯಯನ ಮಾಡಿದವರ ಪೈಕಿ ಇಂಗ್ಲಿಷ್‌ ಭಾಷೆಯಲ್ಲಿ (ಇಂಗ್ಲಿಷ್‌ ಎನ್‌ಸಿಇಆರ್‌ಟಿ ಸೇರಿ) ಶೇ.98.38, ಹಿಂದಿಯಲ್ಲಿ ಶೇ.98.15, ಮರಾಠಿ ಶೇ.97.16, ಸಂಸ್ಕೃತ ಶೇ.99.99, ತಮಿಳು ಮತ್ತು ತೆಲುಗು ಶೇ.100 ಮತ್ತು ಉರ್ದುವನ್ನು ಪ್ರಥಮ ಭಾಷೆಯಾಗಿ ಓದಿದವರಲ್ಲಿ ಶೇ.98.44 ರಷ್ಟು ಮಕ್ಕಳು ಪಾಸಾಗಿದ್ದಾರೆ. ತನ್ಮೂಲಕ ವಿಷಯವಾರು ಫಲಿತಾಂಶದಲ್ಲಿ ಪ್ರಥಮ ಭಾಷಾ ಫಲಿತಾಂಶವೇ ಅತಿ ಕಡಿಮೆಯಾದರೆ, ಪ್ರಥಮ ಭಾಷಾ ಪಟ್ಟಿಯಲ್ಲಿ ಬರುವ ಒಂಬತ್ತು ವಿಷಯಗಳಲ್ಲಿ ಕನ್ನಡ ಭಾಷೆಯಲ್ಲಿ ಅನುತ್ತೀರ್ಣ ಪ್ರಮಾಣ ಇನ್ನೂ ದೊಡ್ಡದಾಗಿದೆ.

ಅಧಿಕಾರಿಗಳು ಏನಂತಾರೆ?

ಇತರೆ ವಿಷಯಗಳಿಗೆ ಹೋಲಿಸಿದರೆ\B ಪ್ರಥಮ ಭಾಷಾ ವಿಷಯದ ಫಲಿತಾಂಶ ಸ್ವಲ್ಪ ಕಡಿಮೆ ಇರುವುದು ನಿಜ. ಹಾಗಂತ ಭಾರೀ ವ್ಯತ್ಯಾಸವೇನೂ ಇಲ್ಲ. ಶೇ.1ಕ್ಕಿಂತ ಕಡಿಮೆಯೇ ಇದೆ. ಉಳಿದೆಲ್ಲಾ ವಿಷಯಗಳಿಗೆ 100 ಅಂಕಗಳಿಗೆ ಪರೀಕ್ಷೆ ಇದ್ದರೆ, ಕನ್ನಡ ಸೇರಿ ಪ್ರಥಮ ಭಾಷೆಯ ಎಲ್ಲಾ ವಿಷಯಗಳಲ್ಲಿ 125 ಅಂಕಗಳಿಗೆ ಮಕ್ಕಳು ಪರೀಕ್ಷೆ ಬರೆಯುತ್ತಾರೆ. ಇದೂ ಕೂಡ ಕಾರಣ ಇರಬಹುದು. ಆದರೂ, ಕನ್ನಡದಲ್ಲೇ ಕಡಿಮೆ ಫಲಿತಾಂಶವನ್ನು ಒಪ್ಪಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ ಎನ್ನುತ್ತಾರೆ ಇಲಾಖೆಯ ಉನ್ನತ ಅಧಿಕಾರಿಗಳು.

--------

ಪ್ರಥಮ ಭಾಷಾ ವಿಷಯಗಳ ಫಲಿತಾಂಶ(2025-26

ವಿಷಯ ಹಾಜರಾತಿ ಪಾಸ್‌ ಶೇ.

ಕನ್ನಡ 6,07,275 5,88,597 96.92%

ಇಂಗ್ಲಿಷ್‌ 1,23,143 1,21,155 98.38%

ಉರ್ದು 21,405 21,072 98.44%

ಸಂಸ್ಕೃತ 7,694 7,693 99.99%

ಮರಾಠಿ 8,630 8,385 97.16% 

ಹಿಂದಿ 1079 1059 98.15%

ತಮಿಳು 287 287 100%

ತೆಲುಗು 126 126 100%

(ಅಗತ್ಯವಿದ್ದರೆ ಬಳಸಿ)

ವಿಷಯವಾರು ಫಲಿತಾಂಶ

ವಿಷಯ ಫಲಿತಾಂಶ

ಪ್ರಥಮ ಭಾಷೆ ಶೇ.97.24

ದ್ವಿತೀಯ ಭಾಷೆ ಶೇ.98.13

ತೃತೀಯ ಭಾಷೆ ಶೇ.98.55

ಗಣಿತ ಶೇ.97.98

ವಿಜ್ಞಾನ ಶೇ.97.80

ಸಮಾಜ ವಿಜ್ಞಾನ ಶೇ.97.85

ಸುಧಾರಣೆಗೆ ಗಮನ

ನಮ್ಮ ಭಾಷೆಯ ಬೋಧನೆ ಹಾಗೂ ಕಲಿಕೆಗೆ ನಾವು ಹೆಚ್ಚು ಆದ್ಯತೆ ನೀಡುವುದನ್ನು ಮರೆಯುತ್ತಿದ್ದೇವಾ ಎನ್ನುವ ಪ್ರಶ್ನೆ ಈ ಫಲಿತಾಂಶದಿಂದ ಉದ್ಭವಿಸುತ್ತಿದೆ. ಮುಖ್ಯಮಂತ್ರಿ ಅವರು ಎಸ್ಸೆಸ್ಸೆಲ್ಸಿ ಓದುವಾಗ ಹಿಂದಿಗೆ ಅಂಕ ಇರಲಿಲ್ಲ, ಗ್ರೇಡಿಂಗ್‌ ಇತ್ತು. ನಾನು ಓದುವಾಗ ಕೇವಲ 50 ಅಂಕಗಳಿಗೆ ಪರೀಕ್ಷೆ ಇತ್ತು. ಈಗಿನ ಮಕ್ಕಳು 100 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದಾರೆ. ಹಾಗಾಗಿಯೇ ಇತರೆ ಭಾಷಾ ಕಲಿಕೆಯಿಂದ ಮಕ್ಕಳಿಗೆ ಆಗುತ್ತಿರುವ ಒತ್ತಡ ಹೇಗೆ ಕಡಿಮೆ ಮಾಡಬೇಕೆಂದು ಇಲಾಖೆ ಮುಂದಿನ ದಿನಗಳಲ್ಲಿ ವೈಜ್ಞಾನಿಕವಾದ ಅಂಕಿ ಅಂಶಗಳೊಂದಿಗೆ ಸೂಕ್ತ ನಿರ್ಧಾರ ಬರಲಿದೆ. ಕನ್ನಡ ಭಾಷಾ ವಿಷಯದಲ್ಲೂ ಫಲಿತಾಂಶ ಸುಧಾರಣೆಗೆ ಹೆಚ್ಚು ಗಮನ ಹರಿಸಲಾಗುವುದು.

- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ